
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಸಮಸ್ಯೆಯನ್ನು ದೂರಾಗಿಸುವ ನಿಟ್ಟಿನಲ್ಲಿ ರಾಜಕಾಲುವೆಗಳ ಬಫರ್ ವಲಯದಲ್ಲಿ ‘ಸಂಚಾರಯುಕ್ತ ಯೋಜನೆ’ ಅಡಿ 300 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.
ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ ರಾಜಕಾಲುವೆ ಬಫರ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿದರು.
ಹೊರ ವರ್ತುಲ ರಸ್ತೆಯ ಪಿ.ಇ.ಎಸ್ ಕಾಲೇಜು ಬಳಿಯ ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ ಅಭಿವೃದ್ಧಿಪಡಿಸುತ್ತಿರುವ ಮೇಲ್ಸೇತುವೆ ಕಾಮಗಾರಿಯು ವೇಗವಾಗಿ ನಡೆಯುತ್ತಿದೆ. ಅಕ್ಟೋಬರ್ 2025ರಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಹೊಸಕೆರೆಹಳ್ಳಿ ಜಂಕ್ಷನ್‌ನಲ್ಲಿ 500 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿಯು ಶೇ. 85 ರಷ್ಟು ಪೂರ್ಣಗೊಂಡಿದ್ದು, ನಾಯಂಡಹಳ್ಳಿ ಜಂಕ್ಷನ್ ಕಡೆಯ ಡೌನ್ ರ‍್ಯಾಂಪ್ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಈ ಸಂಬಂಧ ಬಾಕಿಯಿರುವ ಕಾಮಗಾರಿಗೆ ಮತ್ತಷ್ಟು ವೇಗ ನೀಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ರಾಜರಾಜೇಶ್ವರಿ ನಗರ ವಲಯ ಹೊಸಕೆರೆಹಳ್ಳಿ ಕೋಡಿ ರಸ್ತೆಯ ಬಳಿ ಬರುವ ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಕಾಲುವೆ ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವ ಸಲುವಾಗಿ, ಭೂಸ್ವಾಧೀನದ ಅವಶ್ಯಕತೆಯಿದ್ದರೆ ಅಂತಹ ಜಾಗಕ್ಕೆ ಟಿಡಿಆರ್ ನೀಡಿ ಅದನ್ನು ವಶಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೇಳಿದರು.
ಬಳಿಕ ಹೊಸಕೆರೆ ಹಳ್ಳಿ ಕೋಡಿ ರಸ್ತೆ ಬಳಿಯಿರುವ ಸುತ್ತಮುತ್ತಲಿನ ಕ್ರಾಸ್ ರಸ್ತೆಗಳನ್ನು ಪರಿಶೀಲಿಸಿ ಸುಗಮ ಸಂಚಾರಕ್ಕೆ ಅನುವಾಗುವಂತೆ ರಸ್ತೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚಿಸಿದರು.
ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡುವ ದೃಷ್ಟಿಯಿಂದ ರಾಜಕಾಲುವೆಗಳ ಬಫರ್ ವಲಯದಲ್ಲಿ 'ಸಂಚಾರಯುಕ್ತ ಯೋಜನೆ' ಅಡಿ 300 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಾಣ ಮಾಡಲು ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಈ ಪೈಕಿ ಆರ್.ಆರ್ ನಗರ ವಲಯ ವ್ಯಾಪ್ತಿಯಲ್ಲಿ 70 ಕಿ.ಮೀ ಉದ್ದದ ರಸ್ತೆಯನ್ನು ರಾಜಕಾಲುವೆ ಬಫರ್ ವಲಯದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಬಫರ್ ವಲಯದಲ್ಲಿ ರಸ್ತೆ ನಿರ್ಮಾಣ ಮಾಡುವುದರಿಂದ ಸಾಕಷ್ಟು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಬಹುದಾಗಿದೆ ಎಂದು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (B-SMILE) ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹಲ್ಲಾದ್ ಅವರು ಮಾಹಿತಿ ನೀಡಿದರು.
Advertisement