
ಬೆಂಗಳೂರು: ಆಟೋ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಪ್ರಕರಣ ಸಂಬಂಧ ಬಿಹಾರ ಮೂಲದ ಸಾಫ್ಟ್‌ವೇರ್‌ಮಹಿಳಾ ಉದ್ಯೋಗಿಯನ್ನು ಬೆಳ್ಳಂದೂರು ಪೊಲೀಸರು ಭಾನುವಾರ ಬಂಧಿಸಿದ್ದು, ಬಳಿಕ ಠಾಣಾ ಜಾಮೀನಿನ ಮೇರೆಗೆ ಬಿಡುಗಡೆಗೊಳಿಸಿದ್ದಾರೆ.
ಬೆಳ್ಳಂದೂರು ನಿವಾಸಿ ಪಂಕಾಯಿಣಿ ಮಿಶ್ರಾ (28) ಬಂಧಿತರಾಗಿದ್ದು, ಬೆಳ್ಳಂದೂರು ವೃತ್ತದಲ್ಲಿ ಆಟೋ ಚಾಲಕ ಲೋಕೇಶ್ ಎಂಬುವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು.
ಈ ಕೃತ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನಾಕ್ರೋಶ ವ್ಯಕ್ತವಾಗಿತ್ತು. ಪೊಲೀಸರು, ಲೋಕೇಶ್ ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ವಿಡಿಯೋ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು. ಬಳಿಕ ಅವರಿಗೆ ಮತ್ತೆ ಈ ರೀತಿಯ ದುರ್ವರ್ತನೆ ತೋರಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಠಾಣಾ ಜಾಮೀನು ಮಂಜೂರುಮಾಡಿ ಬಿಡುಗಡೆಗೊಳಿಸಲಾಯಿತು.
ಈ ನಡುವೆ ಠಾಣೆಯಲ್ಲಿ ಹೇಳಿಕೆ ನೀಡಿರುವ ಮಹಿಳೆ, ನಾನು ಗರ್ಭಿಣಿ ಆಗಿದ್ದು, ಆಸ್ಪತ್ರೆಗೆ ಹೋಗಿ ಬರ್ತಿದ್ದೆ. ಈ ವೇಳೆ ಬೈಕಿಗೆ ಹಿಂದಿನಿಂದ ಆಟೋ ಡಿಕ್ಕಿ ಹೊಡೆದಿತ್ತು ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರೇ ನನ್ನನ್ನು ಬೈದು ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ನಾನು ಕೂಡ ಕೋಪಗೊಂಡು ಚಪ್ಪಲಿಯಿಂದ ಹಲ್ಲೆ ಮಾಡಿದೆ. ಕೋಪದ ಭರದಲ್ಲಿ ತಾಳ್ಮೆ ಕಳೆದುಕೊಂಡು ಈ ಕೃತ್ಯ ಎಸಗಿದೆ ಎಂದು ಮಹಿಳೆ ಒಪ್ಪಿಕೊಂಡಿದ್ದಾರೆ.
ಆಟೋ ಚಾಲಕನಿಗೆ ಕ್ಷಮೆಯಾಚನೆ
ಈ ಘಟನೆ ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಪ್ರತಿಭಟನೆಗೆ ಮುಂದಾಗಿದ್ದರು. ಇದರ ಬೆನ್ನಲ್ಲೇ ಮಹಿಳೆ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.
ಎಲ್ಲರ ಮುಂದೆ ಆಟೋ ಚಾಲಕನ ಕಾಲಿಗೆ ಬಿದ್ದ ಮಹಿಳೆ ಮತ್ತು ಅವರ ಪತಿ, "ನಮ್ಮಿಂದ ತಪ್ಪಾಗಿದೆ" ಎಂದು ಕ್ಷಮೆಯಾಚಿಸಿದ್ದಾರೆ. "ನನ್ನಿಂದ ತಪ್ಪಾಗಿದೆ, ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ" ಎಂದು ಹೇಳಿದ್ದಾರೆ.
ನಾವು ಹೋಗುವಾಗ ಏನೋ ಘಟನೆ ಆಯ್ತು. ಬೇಕು ಬೇಕು ಅಂತ ಮಾಡಿದ್ದಲ್ಲ. ನಾನು ಕ್ಷಮೆ ಕೇಳುತ್ತೇನೆ. ನಾನು ಗರ್ಭಿಣಿ. ಗರ್ಭಪಾತ ಆಗುವ ಭಯದಲ್ಲಿ ಹೀಗೆ ಮಾತನಾಡಿದೆ. ಬೆಂಗಳೂರು ಅಂದರೆ ತುಂಬಾ ಇಷ್ಟ. ಬೆಂಗಳೂರು, ಬೆಂಗಳೂರು ಸಂಸ್ಕೃತಿಯನ್ನು ತುಂಬಾ ಗೌರವಿಸುತ್ತೇವೆ ಹಾಗೂ ಪ್ರೀತಿಸುತ್ತೇವೆಂದು ತಿಳಿಸಿದ್ದಾರೆ.
ನಾವು ಮೂರು ವರ್ಷದಿಂದ ಬೆಂಗಳೂರಿನಲ್ಲಿದ್ದೇವೆ. ತವರಿನಂತೆ ನಾವು ಇಷ್ಟ ಪಡುತ್ತೇವೆ. ನಮಗೆ ಬೆಂಗಳೂರು ಬಗ್ಗೆ ಯಾವುದೇ ನೆಗೆಟಿವ್ ಅಭಿಪ್ರಾಯಗಳಿಲ್ಲ. ಆಟೋ ಚಾಲಕರನ್ನು ಗೌರವಿಸುತ್ತೇವೆಂದು ಹೇಳಿದ್ದಾರೆ.
Advertisement