
ಬೆಂಗಳೂರು: ಈದ್ ಅಲ್-ಅಧಾ (ಬಕ್ರೀದ್) ಹಬ್ಬ ಹತ್ತಿರಬರುತ್ತಿದ್ದು ಈ ನಡುವೆ ಬಲಿ ನೀಡುವ ಜಾನುವಾರುಗಳ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ದರಗಳು ಪ್ರತಿ ಕಿಲೋಗ್ರಾಂಗೆ 100 ರಿಂದ 150 ರೂ.ಗಳಷ್ಟು ಹೆಚ್ಚಾಗಿದೆ.
ಹಣದುಬ್ಬರದಿಂದಾಗಿ ಕುರಿಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಟ್ಯಾನರಿ ರಸ್ತೆಯ ದೊಡ್ಡಿ ಕುರಿ ಮಾರುಕಟ್ಟೆಯಲ್ಲಿ ವ್ಯವಹಾರದಲ್ಲಿ ನಿರತರಾಗಿರುವ ಕುರಿ ಮಾರಾಟಗಾರ ಅಮ್ರತ್ ಅವರು ಹೇಳಿದ್ದಾರೆ.
ಕುರಿಗಳ ಬೆಲೆ ಈಗ ಪ್ರತಿ ಕೆಜಿಗೆ 450 ರೂ.ಗಳಿಂದ ಪ್ರಾರಂಭವಾಗಿ ತಳಿ ಮತ್ತು ಗಾತ್ರವನ್ನು ಅವಲಂಬಿಸಿ 800 ರೂ.ಗಳವರೆಗೆ ಏರಿಕೆಯಾಗಿದೆ.
ಮಾರಾಟಗಾರ ಸೈಯದ್ ನಜೀರ್ ಎಂಬುವವರು ಮಾತನಾಡಿ, ಅಮೀನಗಡ ತಳಿಯ ಬೆಲೆ ಪ್ರಸ್ತುತ ಪ್ರತಿ ಕೆಜಿಗೆ 650 ರೂ.ಗಳಾಗಿದೆ. ಅತ್ಯಂತ ದುಬಾರಿ ತಳಿಗಳಲ್ಲಿ ಒಂದೆಂದು ಪರಿಗಣಿಸಲಾದ ಬನ್ನೂರ್ ಕುರಿಯನ್ನು ಪ್ರತಿ ಕೆಜಿಗೆ 800 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೀಟಲ್ ಮತ್ತು ಯೆಲ್ಗಾ ಕುರಿ ಬೆಲೆ ಪ್ರತಿ ಕೆಜಿಗೆ 650 ರೂ.ಗಳಾಗಿದ್ದರೆ, ಆಂಧ್ರಪ್ರದೇಶದ ಚೆನ್ನೂರಿನ ಸ್ಥಳೀಯ ತಳಿ ಕುರಿಗಳು ಪ್ರತಿ ಕೆಜಿಗೆ 450 ರೂ.ಗಳಿಗೆ ಲಭ್ಯವಿದೆ. ಈ ಬೆಲೆಗಳು ಪ್ರತಿಯೊಂದು ತಳಿಯ ಗುಣಮಟ್ಟ, ಗಾತ್ರ ಮತ್ತು ಮೂಲವನ್ನು ಪ್ರತಿಬಿಂಬಿಸುತ್ತವೆ, ಸ್ಥಳೀಯ ಮತ್ತು ಆಂಧ್ರ ಮೂಲದ ಕುರಿಗಳು ಸಾಮಾನ್ಯವಾಗಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬನ್ನೂರು ಮತ್ತು ಅಮೀನಗಡ ತಳಿಗಳ ಕುರಿಗಳ ಮಾಂಸ ಮೃದುವಾಗಿದ್ದು, ಹೀಗಾಗಿ ಅದು ಹೆಸರುವಾಸಿಯಾಗಿದೆ. ಈ ಕುರಿಗಳಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಕುರ್ಬಾನಿ (ಬಲಿದಾನ) ಗ್ರಾಹಕರು ಹೆಚ್ಚಾಗಿ ಕೊಂಬುಗಳನ್ನು ಹೊಂದಿರುವ ದನಗಳಿಗೆ ಹುಡುಕುತ್ತಾರೆ ಎಂದು ವ್ಯಾಪಾರಿ ಅಮ್ರತ್ ಅವರು ತಿಳಿಸಿದ್ದಾರೆ.
ಪ್ರತಿ ವರ್ಷ ಜಾನುವಾರುಗಳ ಬೆಲೆಗಳು ಹೆಚ್ಚಾಗುತ್ತವೆ, ವಿಶೇಷವಾಗಿ ಬಕ್ರೀದ್ ಸಮಯದಲ್ಲಿ, ಆದರೆ, ನಮ್ಮ ದೇವರಿಗೆ ಅರ್ಪಿಸಲು ಕುರ್ಬಾನಿಗಾಗಿ ದನಗಳನ್ನು ಖರೀದಿಸುತ್ತೇವೆ. ಈ ಸಮಯದಲ್ಲಿ ನಾವು ಹಣದ ಬಗ್ಗೆ ಹೆಚ್ಚು ಚಿಂತಿಸುವುದಿಲ್ಲ, ಉತ್ತಮವಾದುದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತೇವೆಂದು ಗ್ರಾಹಕಿ ಹಸೀನಾ ಎಂಬುವವರು ಹೇಳಿದ್ದಾರೆ.
Advertisement