
ಬೆಂಗಳೂರು: ನೊಂದವರ ಪರ ಕೆಲಸ ಮಾಡಿ, ರಿಯಲ್ ಎಸ್ಟೇಟ್ ಏಜೆಂಟ್ ರೀತಿ ಕೆಲಸ ಮಾಡಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ನಗರದ ನೂತನ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಐಪಿಎಸ್ ಅವರು ಭಾನುವಾಪ ಪೊಲೀಸ್ ಇನ್ಸ್ಪೆಕ್ಟರ್ (PI), ಸಹಾಯಕ ಪೊಲೀಸ್ ಆಯುಕ್ತರು (ACP), ಉಪ ಪೊಲೀಸ್ ಆಯುಕ್ತರು (DCP) ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಇಡೀ ದಿನ ಸಭೆ ನಡೆಸಿದರು.
ಬೆಳಗ್ಗೆ ಆಡಳಿತ ವಿಭಾಗದ ಅಧಿಕಾರಿಗಳ ಸಭೆ ನಡೆಸಿದ ಸೀಮಂತ್ ಕುಮಾರ್ ಸಿಂಗ್ ಅವರು ಮಧ್ಯಾಹ್ನ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ಗಳು, ಎಸಿಪಿಗಳು ಹಾಗೂ ಡಿಸಿಪಿಗಳ ಪ್ರತ್ಯೇಕ ಸಭೆ ನಡೆಸಿದರು.
ನಗರದಲ್ಲಿ ಅಪರಾಧಗಳ ನಿಯಂತ್ರಣ, ರಿಯಲ್ ಎಸ್ಟೇಟ್ ದಂಧೆ, ರೌಡಿ ಚಟುವಟಿಕೆಗಳು, ಕಾನೂನು ಬಾಹಿರ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸೈಬರ್ ವಂಚಕರು, ಮಾದಕ ವಸ್ತು ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಜರುಗಿಸಬೇಕು. ನೊಂದವರಪರ ಕೆಲಸ ಮಾಡಬೇಕು. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿ ಕೊಳ್ಳುವುದು, ಸಹಾಯ ಮಾಡುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಬಳಿಕ ನಗರ ಸಂಚಾರ ಸಮಸ್ಯೆಗಳ ಬಗ್ಗೆ ಕೆಲ ಕಾಲ ಚರ್ಚಿಸಿದ ಆಯುಕ್ತರು, ವಾಹನ ಸಂಚಾರ ದಟ್ಟಣೆ ತಗ್ಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಂಚಾರ ಸಮಸ್ಯೆ ಹೆಚ್ಚಿರುವ ಕಡೆ ಗಮನ ಹರಿಸುವಂತೆ ಸೂಚಿಸಿದರು.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇಸಿಕ್ ಪೊಲೀಸಿಂಗ್‌ಗೆ ಒತ್ತು ನೀಡುವಂತೆ ಹೇಳಿದ್ದೇನೆ. ರೌಡಿ ಚಟುವಟಿಕೆ, ಮಟ್ಕಾ, ಬೆಟ್ಟಿಂಗ್, ಮಾದಕವಸ್ತು ಮಾರಾಟ ದಂಧೆ, ಅಪರಾಧಗಳ ನಿಯಂತ್ರಣಕ್ಕೆ ಸೂಚಿಸಲಾಗಿದೆ. ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡು ಜನಸ್ನೇಹಿಯಾಗಿ ಕೆಲಸ ಮಾಡುವಂತೆ ಹೇಳಿದ್ದೇನೆ. ಇತ್ತೀಚೆಗೆ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊಸ ಠಾಣೆಗಳನ್ನು ಸೇರ್ಪಡೆಗೊಳಿಸಿದ್ದು, ಈ ಠಾಣೆಗಳಿಗೆ ಹೆಚ್ಚುವರಿ ಅಧಿಕಾರಿ, ಸಿಬ್ಬಂದಿ ನೀಡುವುದಾಗಿ ಸೂಚಿಸಿದ್ದೇನೆ ಎಂದು ಹೇಳಿದರು.
Advertisement