
ಬೆಂಗಳೂರು: ಅತಿವೇಗದ ಚಾಲನೆ ಬಗ್ಗೆ ದೂರು ನೀಡಿದ್ದಕ್ಕೆ ಆಕ್ರೋಶಗೊಂಡ Rapido ಬೈಕ್ ಸವಾರ ಮಹಿಳಾ ಪ್ರಯಾಣಿಕಳಿಗೆ ರಸ್ತೆ ಮಧ್ಯೆ ಕಪಾಳಮೋಕ್ಷ ಮಾಡಿದ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬೈಕ್ ಸವಾರನ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಆಭರಣ ಅಂಗಡಿಯೊಂದರ ಉದ್ಯೋಗಿಯಾಗಿದ್ದ ಮಹಿಳೆ ರ್ಯಾಪಿಡೋ ಬೈಕ್ ಬುಕ್ ಮಾಡಿದ್ದಳು. ಬೈಕ್ ಸವಾರನ ಅತಿವೇಗದ ಚಾಲನೆ ವಿರುದ್ಧ ಆರೋಪಿಸಿದ ಮಹಿಳೆ ಪ್ರಯಾಣವನ್ನು ಅರ್ಧದಲ್ಲೇ ಕೊನೆಗೊಳಿಸಲು ಆಯ್ಕೆ ಮಾಡಿದ್ದಳು. ಈ ವೇಳೆ ಸವಾರ ಮಹಿಳೆಯನ್ನು ಪ್ರಶ್ನಿಸಿದ್ದು ನಂತರ ವಾಗ್ವಾದ ಶುರುವಾಗಿದೆ. ಮಾತಿಗೆ ಮಾತು ಬೆಳೆದ ಸವಾರ ಮಹಿಳೆಯ ಕಪಾಳಕ್ಕೆ ಹೊಡೆದಿದ್ದು ಆಕೆ ನೆಲದ ಮೇಲೆ ಉರುಳಿ ಬಿದ್ದಿದ್ದಾಳೆ.
ಮಹಿಳೆ ಇಂಗ್ಲಿಷ್‌ನಲ್ಲಿ ಮಾತನಾಡಿದ್ದು ಚಾಲಕ ಕನ್ನಡದಲ್ಲಿ ಮಾತನಾಡಿದ್ದು ಪರಿಸ್ಥಿತಿ ಇನ್ನಷ್ಟು ಹದಗೆಡಿಸಿತು. ನಂತರ ಮಹಿಳೆ ಹಣ ಪಾವತಿಸಲು ಜೊತೆ ಕಂಪನಿ ನೀಡಿದ ಹೆಲ್ಮೆಟ್ ಅನ್ನು ಹಿಂತಿರುಗಿಸಲು ನಿರಾಕರಿಸಿದಾಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಇವರಿಬ್ಬರ ಜಗಳವನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದು ನಂತರ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಹಲವು ಜನರು ಕಾಣಿಸಿಕೊಂಡಿದ್ದಾರೆ. ಆದರೆ ಹಲ್ಲೆಯ ಸಮಯದಲ್ಲಿ ಯಾರೂ ಮಧ್ಯಪ್ರವೇಶಿಸಲಿಲ್ಲ.
ಪೊಲೀಸ್ ಮೂಲಗಳು ಹೇಳುವಂತೆ, ಮಹಿಳೆ ಆರಂಭದಲ್ಲಿ ಔಪಚಾರಿಕ ದೂರು ದಾಖಲಿಸಲು ಮುಂದಾಗಲಿಲ್ಲ. ಹೀಗಾಗಿ NCR ದಾಖಲಿಸಲಾಗಿದೆ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ NCR ಅನ್ನು ಔಪಚಾರಿಕ FIR ಆಗಿ ಅಪ್‌ಗ್ರೇಡ್ ಮಾಡುವ ಬಗ್ಗೆ ಯೋಚಿಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ವಿವರವಾದ ತನಿಖೆ ನಡೆಯುತ್ತಿದೆ.
ಈ ಘಟನೆಯು ಅಪ್ಲಿಕೇಶನ್ ಆಧಾರಿತ ಸಾರಿಗೆ ಸೇವೆಗಳನ್ನು ಬಳಸುವ ಮಹಿಳೆಯರ ಸುರಕ್ಷತೆಯ ಕುರಿತು ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನದ ನೀಡಿದ್ದು ಇಂದಿನಿಂದ ಬೈಕ್ ಟ್ಯಾಕ್ಸಿಗಳು ನಿಷೇಧಿಸಲಾಗಿತ್ತು. ಆದರೂ ಬೈಕ್ ಟ್ಯಾಕ್ಸಿ ಸೇವೆ ಮುಂದೂವರೆದಿದೆ. ಬೈಕ್ ಟ್ಯಾಕ್ಸಿಗಳು ಕಾನೂನುಬದ್ಧವಾಗಿ ವಾಣಿಜ್ಯ ವಾಹನಗಳಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಕೋರ್ಟ್ ನಲ್ಲಿ ವಾದಿಸಿತ್ತು.
Advertisement