
ಬೆಂಗಳೂರು: ನಗರದ ಎಲ್ಲಾ ಫುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸಿ, ಗೊತ್ತುಪಡಿಸಿದ ಸ್ಥಳದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುತ್ತೇವೆಂಬ ಸರ್ಕಾರದ ನಿರ್ಣಯಕ್ಕೆ ಬೀದಿ ಬದಿ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸಲು ಮುಂದಾಗಿವೆ.
ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ವಿರುದ್ಧ ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘ ಕಿಡಿಕಾರಿದ್ದು, ನಗರದ ಫ್ರೀಡಂ ಪಾರ್ಕ್ ನಲ್ಲಿ ಮಂಗಳವಾರ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
ಪ್ರತಿಭಟನೆಯಲ್ಲಿ ಕೆ.ಆರ್. ಮಾರುಕಟ್ಟೆ, ಶಿವಾಜಿನಗರ, ಜಯನಗರ, ವಿಜಯನಗರ, ಯಶವಂತಪುರ ಮತ್ತು ಗಾಂಧಿ ಬಜಾರ್‌ನಂತಹ ಪ್ರಮುಖ ಮಾರುಕಟ್ಟೆ ಪ್ರದೇಶಗಳ ಮಾರಾಟಗಾರರು ಪಾಲ್ಗೊಳ್ಳುವ ಸಾಧ್ಯತೆಗಳಿವೆ.
ಈ ಹಿಂದೆ ಹೇಳಿಕೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ಬೀದಿ ಬದಿ ವ್ಯಾಪಾರಿಗಳಿಗೆ ರಸ್ತೆಬದಿ ಮಳಿಗೆ ನಿರ್ಮಾಣಕ್ಕೆ ಮುಂದಿನ ದಿನಗಳಲ್ಲಿ ಅವಕಾಶವಿಲ್ಲ. ಈ ಬಗ್ಗೆ ನ್ಯಾಯಾಲಯದ ನಿರ್ದೇಶನವೂ ಇದೆ. ಪ್ರಸ್ತುತ ಸುಮಾರು 3,778 ಜನ ತಳ್ಳುವ ಗಾಡಿ ಬೇಕೆಂದು ಪಾಲಿಕೆಗೆ ಅರ್ಜಿ ಹಾಕಿದ್ದಾರೆ. ಈ ವರ್ಷ 10 ಸಾವಿರ ತಳ್ಳುವ ಗಾಡಿಗಳನ್ನು ನೀಡಲು ತಯಾರಿದ್ದೇವೆ. ಗಾಡಿ ಬೇಕಾದವರು ನೋಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬೇಕು. ನೋಂದಣಿ ಮಾಡಿಸಿಕೊಂಡವರ ಪೈಕಿ ಶೇಕಡವಾರು ಪ್ರಮಾಣದಲ್ಲಿ ಈ ಸೌಲಭ್ಯ ನೀಡಲಾಗುವುದು. ನಾಲ್ಕೂ ಮಾದರಿಯ ತಳ್ಳುವ ಗಾಡಿಗಳನ್ನು ತಯಾರಿಸಲು ಟೆಂಡರ್ ಸಹ ಕರೆಯಲಾಗುವುದು.
ಬಿಬಿಎಂಪಿಯಲ್ಲಿ ನೋಂದಣಿ ಮಾಡಿಕೊಳ್ಳದ ವ್ಯಾಪಾರಿಗಳು ತಳ್ಳುವ ಗಾಡಿಗಳಿಗೆ ಅರ್ಜಿ ಹಾಕಲು ಅರ್ಹರಲ್ಲ. ಪ್ರತಿ ಬೀದಿಬದಿ ವ್ಯಾಪಾರಿಗಳ ಲೆಕ್ಕಾಚಾರ ಪಾಲಿಕೆ ಬಳಿ ಇರಬೇಕು. ಪೊಲೀಸರು, ಅಧಿಕಾರಿಗಳು, ಗೂಂಡಾಗಳು ತೊಂದರೆ ಕೊಡುತ್ತಾರೆ ಎನ್ನುವ ದೂರುಗಳನ್ನು ತಪ್ಪಿಸಲು ಈ ವ್ಯವಸ್ಥೆ ತರಲಾಗುತ್ತಿದೆ. ಒಂದು ಕುಟುಂಬಕ್ಕೆ ಒಂದೇ ಗಾಡಿ ನೀಡಲಾಗುವುದು. ಪ್ರತಿದಿನ ಯಾವ ಜಾಗದಲ್ಲಿ ವ್ಯಾಪಾರ ನಡೆಸಲಾಯಿತು ಎನ್ನುವ ಮಾಹಿತಿ ತಿಳಿದುಕೊಳ್ಳುವ ವ್ಯವಸ್ಥೆ ಜಾರಿಗೆ ತರಲಿದ್ದೇವೆ. ಗಾಡಿಯನ್ನು ಮನೆಯಲ್ಲಿ ನಿಲ್ಲಿಸಿಕೊಳ್ಳಬೇಕು, ಮತ್ತೊಬ್ಬರಿಗೆ ಮಾರುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದರು.
ಸರ್ಕಾರ ಈ ನಡೆಗೆ ಬೀದಿ ವ್ಯಾಪಾರಿಗಳು ಕಿಡಿಕಾರಿದ್ದಾರೆ. ಸರ್ಕಾರ ಈ ನಿರ್ಧಾರ ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಮತ್ತು ಬೀದಿ ವ್ಯಾಪಾರಿಗಳ ನಿಯಂತ್ರಣ) ಕಾಯ್ದೆ, 2014 ಅನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.
ಸರ್ಕಾರದ ಘೋಷಣೆಯ ನಂತರ, ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳುವುದನ್ನು ತೀವ್ರಗೊಳಿಸಿದ್ದಾರೆ, ಆಗಾಗ್ಗೆ ಸರಕುಗಳನ್ನು ವಶಪಡಿಸಿಕೊಳ್ಳುವುದು ಮತ್ತು ಹೊರಹಾಕುತ್ತಿದ್ದಾರೆಂದು ಕಿಡಿಕಾರಿದ್ದಾರೆ.
ನಗರಾದ್ಯಂತದ ಸಮೀಕ್ಷೆಯು ಸುಮಾರು 34,000 ಮಾರಾಟಗಾರರನ್ನು ಗುರುತಿಸಿದ್ದರೂ, ಇನ್ನೂ ಸಾವಿರಾರು ಮಾರಾಟಗಾರರು ಗುರುತಿಸಲ್ಪಟ್ಟಿಲ್ಲ. ಅಧಿಕೃತ ದಾಖಲೆಗಳಿಂದ ಹೊರಗುಳಿದಿದ್ದಾರೆ. ಇವರಿಗೆ ಯಾವುದೇ ಕಾನೂನು ರಕ್ಷಣೆ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾರುಕಟ್ಟೆಯಲ್ಲಿನ ಶೌಚಾಲಯ, ಶುದ್ಧ ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಬಗ್ಗೆಯೂ ಮಾರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.
Advertisement