
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಕುರಿತು ಖಾತರಿ ಪಡಿಸಿಕೊಳ್ಳಲು ಮನೆಗಳಿಗೆ ಸ್ಟಿಕ್ಕರ್ ಅಂಟಿಸುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳಿಗೆ ಸೇರಿದವರ ವೈಜ್ಞಾನಿಕ ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದ್ದು, ಜೂನ್ 30ರವರೆಗೆ ಕಾಲಾವಕಾಶವಿದೆ. ನಗರದಾದ್ಯಂತ ಸಮೀಕ್ಷಾ ಕಾರ್ಯ ನಡೆಯುತ್ತಿದ್ದು, ಪ್ರತಿ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಿರುವ ಕುರಿತು ಖಾತರಿಪಡಿಸಿಕೊಂಡು ಸ್ಟಿಕರ್ ಅಂಟಿಸಲಾಗುತ್ತದೆ.
ಸ್ಟಿಕ್ಕರ್ ಅಂಟಿಸುವ ಕಾರ್ಯಕ್ಕೆ ಕಾಲೇಜುಗಳ ಎನ್‌ಎಸ್‌ಎಸ್ ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳ ಸ್ವಯಂಸೇವಕರ ತಂಡಗಳನ್ನು ರಚಿಸಲಾಗಿದೆ. ಯಾವುದಾದರೂ ಮನೆಯವರು ಸಮೀಕ್ಷೆಯಲ್ಲಿ ಪಾಲ್ಗೊಳ್ಳದಿದ್ದಲ್ಲಿ ಸ್ಟಿಕ್ಕರ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕ ಸ್ವಯಂ ಪ್ರೇರಿತವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಲಿದ್ದಾರೆ. ಹತ್ತಿರದ ಬೆಂಗಳೂರು ಒನ್, ಬಿಬಿಎಂಪಿ ವಾರ್ಡ್ ಕಚೇರಿಗಳಲ್ಲೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರು ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸದವರು ಕೂಡಲೇ ಭಾಗವಹಿಸುವಂತೆ ಬಿಬಿಎಂಪಿ ಮನವಿ ಮಾಡಿದೆ.
ನಿನ್ನೆಯಷ್ಟೇ ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರಾದ ಸುರಾಳ್ಕರ್ ವಿಕಾಸ್ ಕಿಶೋರ್ ರವರು ಪರಿಶಿಷ್ಟ ಜಾತಿ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಪರಿಶೀಲನೆ ನಡೆಸಿದರು.
ಈ ವೇಳೆ ಮನೆಗೆ ಭೇಟಿ ನೀಡುವ ಬಿಬಿಎಂಪಿ ತಂಡ ಅಥವಾ ಗಣತಿದಾರರಿಗೆ ಸಹಕರಿಸಿ ಮತ್ತು ಸರಿಯಾದ ಮಾಹಿತಿ ನೀಡಿ. ಅಲ್ಲದೆ, ನಿಮ್ಮ ಮನೆಗೆ ಅಂಟಿಸಿದ ಸ್ಟಿಕ್ಕರ್ ಅನ್ನು ತೆಗೆದಿರಲು ನಾಗರೀಕರಲ್ಲಿ ಮನವಿ ಮಾಡಿದರು.
ಇನ್ನು ಮಹದೇವಪುರದ ಮನೆಗಳಿಗೆ ಭೇಟಿ ನೀಡಿದ ಜಂಟಿ ಆಯುಕ್ತೆ ಕೆ. ದಾಕ್ಷಾಯಿಣಿ ಅವರು, ಎಸ್‌ಸಿ ಸಮುದಾಯಗಳಿಗೆ ಸೇರಿದವರು ಎಂದು ಹೇಳಿದರೆ, ಅವರನ್ನು ಎಣಿಕೆ ಮಾಡಿದ್ದರೆ ಸ್ಟಿಕ್ಕರ್‌ಗಳನ್ನು ಅಂಟಿಸಲಾಗುತ್ತದೆ. ಎಸ್‌ಸಿ ಸಮುದಾಯಗಳಿಗೆ ಸೇರಿದ ಮನೆಗಳನ್ನು ಬಿಟ್ಟುಬಿಟ್ಟಿದ್ದರೆ, ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಯ ಮೊಬೈಲ್ ಅಪ್ಲಿಕೇಶನ್‌ನಲ್ಲಿ ವಿವರಗಳನ್ನು ಸೇರಿಸುತ್ತಾರೆ ಎಂದು ಹೇಳಿದರು.
Advertisement