
ಬೆಂಗಳೂರು: ಮಲೆ ಮಹದೇಶ್ವರ ಸಂರಕ್ಷಿತಾರಣ್ಯದಲ್ಲಿ 5 ಹುಲಿಗಳು ಸಾವನ್ನಪ್ಪಿದ ದಾರುಣ ಘಟನೆ ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಬೆಂಗಳೂರಿನಲ್ಲೂ ಅಂತಹುದೇ ಘಟನೆ ವರದಿಯಾಗಿದೆ.
ಹೌದು.. ಬೆಂಗಳೂರಿನ ಕೆ.ಆರ್.ಪುರಂನ (KR Puram) ಭಟ್ಟರಹಳ್ಳಿಯಲ್ಲಿ ಐದು ಬೀದಿನಾಯಿಗಳು ನರಳಿ ನರಳಿ ಪ್ರಾಣಬಿಟ್ಟ ಅಮಾನವೀಯ ಘಟನೆ ನಡೆದಿದೆ. ಆರು ಬೀದಿನಾಯಿಗಳು ರಕ್ತವಾಂತಿ ಮಾಡಿಕೊಂಡಿದ್ದವು. ಈ ಆರು ನಾಯಿಗಳ ಪೈಕಿ ಐದು ನಾಯಿಗಳು ಮೃತಪಟ್ಟಿವೆ. ಐದು ಬೀದಿ ನಾಯಿಗಳು ಒದ್ದಾಡಿ ಪ್ರಾಣಬಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ಬೀದಿ ನಾಯಿಗಳ ಸಾವಿಗೆ ಕಾರಣ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ನಾಯಿಗಳ ರಕ್ತದ ಮಾದರಿ ರವಾನೆ ಮಾಡಲಾಗಿದ್ದು, ಈ ಬೀದಿನಾಯಿಗಳಿಗೆ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅದು ಬೀದಿ ನಾಯಿಗಳಾಗಿರುವುದರಿಂದ ಯಾರನ್ನೂ ಅನುಮಾನಿಸಲು ಸಾಧ್ಯವಿಲ್ಲ ಎಂದು ಸ್ಥಳೀಯ ನಿವಾಸಿ ಮಹೇಶ್ ಹೇಳಿದ್ದಾರೆ. "ಯಾರೋ ನಾಯಿಗಳಿಗೆ ವಿಷಪ್ರಾಶನ ಮಾಡಿದ್ದಾರೆ. ರಾತ್ರಿ 10 ಗಂಟೆ ಸುಮಾರಿಗೆ ಅವೆಲ್ಲವೂ ಅಸ್ವಸ್ಥಗೊಂಡು ಸಾವನ್ನಪ್ಪಿವೆ" ಎಂದು ಅವರು ಹೇಳಿದರು.
ಮನೆ ಮುಂದೆ ಆಟವಾಡುತ್ತಿದ್ದ 6 ನಾಯಿಗಳು
ಸಿಸಿಟಿವಿ ದೃಶ್ಯಗಳಲ್ಲಿ, ಆರು ನಾಯಿಗಳು ಮನೆಯ ಮುಂದೆ ಆಟವಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಇದ್ದಕ್ಕಿದ್ದಂತೆ ನಾಯಿಗಳು ಅಸ್ವಸ್ಥಗೊಂಡಿವೆ. ಸ್ಥಳೀಯರು ಅವುಗಳನ್ನು ನೀರು ಕುಡಿಸಿ ರಕ್ಷಿಸಲು ಪ್ರಯತ್ನಿಸಿದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಆರು ನಾಯಿಗಳ ಪೈಕಿ ಐದು ಸ್ಥಳದಲ್ಲೇ ಸಾವನ್ನಪ್ಪಿವೆ. ನಾಯಿಗಳು ಸಾವಿಗೆ ಕೆಲವು ನಿಮಿಷಗಳ ಮೊದಲು ಸಾಮಾನ್ಯವಾಗಿ ಓಡಾಡುತ್ತಿದ್ದವು. ಈಗ ದಿಢೀಕ್ ಸಾವ್ನನಪ್ಪಿವೆ. ವಿಷಪ್ರಾಶನ ಆಗಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.
ಇದೇ ಮೊದಲೇನಲ್ಲ..
ಇನ್ನು ಕೆಆರ್ ಪುರಂನಲ್ಲಿ ಬೀದಿನಾಯಿಗಳ ಮೇಲಿನ ದೌರ್ಜನ್ಯ ಇದೇ ಮೊದಲೇನಲ್ಲ.. ಈ ಹಿಂದೆ ಇದೇ ಪ್ರದೇಶದಲ್ಲಿ ವಾಹನವೊಂದು ಹರಿದ ಪರಿಣಾಮ ಬೀದಿ ನಾಯಿ ಸಾವಪ್ಪಿದ್ದತ್ತು.
ಜೂನ್ 17 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಹಾಲಕ್ಷ್ಮಿ ಟಿಂಬರ್ ಮಾರ್ಟ್ ಹಿಂಭಾಗದ ರಸ್ತೆಯಲ್ಲಿ ಟಾಟಾ ಏಸ್ ಸರಕು ವಾಹನದ ಚಾಲಕ ಉದ್ದೇಶಪೂರ್ವಕವಾಗಿ ಬೀದಿನಾಯಿ ಮೇಲೆ ವಾಹನ ಹರಿಸಿದ್ದ.
Advertisement