
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಕಂದಾಯ ಇಲಾಖೆ ಬ್ಯಾಟರಾಯನಪುರದಲ್ಲಿ ಭಾನುವಾರ ಆಯೋಜಿಸಿದ್ದ ಇ-ಖಾತಾ ಮೇಳಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇ-ಖಾತಾ ಮೇಳ ಮತ್ತು ಮನೆ-ಮನೆಗೆ ಇ-ಖಾತಾ ವಿತರಣಾ ಕಾರ್ಯಕ್ರಮದ ಸಂದರ್ಭದಲ್ಲಿ, 4,000 ಕ್ಕೂ ಹೆಚ್ಚು ಟೋಕನ್‌ಗಳನ್ನು ವಿತರಿಸಲಾಗಿದ್ದು, 1,679 ಅರ್ಜಿಗಳ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಈ ಪೈಕಿ 677 ಅರ್ಜಿದಾರರು ತಮ್ಮ ಅಂತಿಮ ಇ-ಖಾತಾಗಳನ್ನು ಸ್ಥಳದಲ್ಲೇ ಸ್ವೀಕರಿಸಿದ್ದಾರೆ.
ಹೆಚ್ಚಿನ ನಾಗರಿಕರು ಸೇವೆಗಾಗಿ ಕಾಯುತ್ತಿರುವುದರಿಂದ, ಮೇಳವು ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಸಹಯೋಗದಲ್ಲಿ ಬ್ಯಾಟರಾಯನಪುರದ ಸಹಕಾರ ನಗರ ಮೈದಾನದಲ್ಲಿ ಭಾನುವಾರ ನಡೆದ ಬೃಹತ್ ಇಖಾತಾ ಮೇಳ ಹಾಗೂ ಮನೆ ಮನೆಗೆ ಇ-ಖಾತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ.ಶಿವಕುಮಾರ್ ಅವರು, “ನಿಮ್ಮ ಬದುಕು, ಆಸ್ತಿ, ಖಾತೆಗಳ ರಕ್ಷಣೆಯೇ ನಮ್ಮ ಗ್ಯಾರಂಟಿ, ಸಾರ್ವಜನಿಕರ ಖಾಸಗಿ ಆಸ್ತಿ ರಕ್ಷಣೆಗೆ ಸರ್ಕಾರವೇ ಜನರ ಮನೆ ಬಾಗಿಲಿಗೆ ಬಂದಿದೆ. ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ಖಾತಾ ನೀಡುವ ಕ್ರಾಂತಿಕಾರಿ 'ಮನೆ ಮನೆಗೆ ಇ-ಖಾತಾ' ಕಾರ್ಯಕ್ರಮಕ್ಕೆ ಪ್ರಾಯೋಗಿಕ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳನ್ನು ಡಿಜಿಟಲೀಕರಣಗೊಳಿಸಿ ನಿಮ್ಮ ಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾವಣೆ ತರಲು ತೀರ್ಮಾನಿಸಿದ್ದೇನೆ. ಕಂದಾಯ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆ ನೀಡುತ್ತಿದ್ದೇವೆ. ಜನರ ಹಿತ, ಬದುಕು ಹಾಗೂ ಆಸ್ತಿ ರಕ್ಷಣೆಗಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಜುಲೈ 1ರಿಂದ ಒಂದು ತಿಂಗಳ ಕಾಲ ಇ-ಖಾತಾ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಜನರು ಭಾಗವಹಿಸಿ ತಮ್ಮ ಆಸ್ತಿ ಇ-ಖಾತೆ ಮಾಡಿಸಿಕೊಂಡು ವಂಚನೆಯಿಂದ ತಪ್ಪಿಸಿಕೊಳ್ಳಬಹುದು. ನಂತರ ಬೆಂಗಳೂರಿನ ಎಲ್ಲಾ ವಾರ್ಡ್‌ಗಳಲ್ಲೂ ಇಂತಹ ಕಾರ್ಯಕ್ರಮ ಮಾಡುತ್ತೇವೆ.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25 ಲಕ್ಷ ಆಸ್ತಿಗಳಿದ್ದು, ಈ ಎಲ್ಲಾ ಆಸ್ತಿಗಳ ಡಿಜಿಟಲಿಕರಣಗೊಳಿಸಿ ನಿಮ್ಮಮನೆ ಬಾಗಿಲಿಗೆ ನೀಡುವಂತೆ ಕ್ರಾಂತಿಕಾರಿ ಬದಲಾ ವಣೆ ತರಲು ತೀರ್ಮಾನಿಸಿದ್ದೇನೆ. ನೀವು ನಿಮ್ಮ ಆಸ್ತಿ ದಾಖಲೆಗಳನ್ನು ಅಪ್ ಲೋಡ್ ಮಾಡಿ ಇ- ಖಾತಾ ಮಾಡಿಕೊಳ್ಳಿ. ಒಂದು ವೇಳೆ ನಿಮಗೆ ಇದು ಸಾಧ್ಯವಾಗದೆ ಇದ್ದರೆ ನಿಮಗೆ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ. ಅವರೇ ಬಂದು ನಿಮ್ಮ ದಾಖಲೆ ಅಪ್‌ಲೋಡ್ ಮಾಡಿ ಮನೆ ಬಾಗಿಲಿಗೆ ಇ-ಖಾತಾ ನೀಡುತ್ತಾರೆ ಎಂದು ವಿವರಿಸಿದರು.
ಪಾಲಿಕೆ ವ್ಯಾಪ್ತಿಯ 25 ಲಕ್ಷ ಆಸ್ತಿಗಳ ಪೈಕಿ 5 ಲಕ್ಷ ಆಸ್ತಿಗಳ ಕರಡು ಇ-ಖಾತಾ ವಿತರಣೆ ಮಾಡಲಾಗಿದೆ. ಬ್ಯಾಟರಾಯನಪುರ ಕ್ಷೇತ್ರದಲ್ಲಿ 50 ಸಾವಿರ ಮನೆ ಗಳಿಗೆ ಈ ಖಾತಾ ದಾಖಲೆ ವಿತರಣೆ ಮಾಡಲಾಗಿದೆ. ನಿಮ್ಮ ಗುರುತಿನ ಚೀಟಿಗೆ ಹೇಗೆ ಪ್ರತ್ಯೇಕ ಸಂಖ್ಯೆ ನೀಡಲಾಗಿದೆಯೋ ಅದೇ ರೀತಿ ನಿಮ್ಮ ಆಸ್ತಿಗಳಿಗೂ ಪ್ರತ್ಯೇಕ ಸಂಖ್ಯೆ ನೀಡಲು ನಿಮ್ಮ ಸರ್ಕಾರ ಬದ್ಧ ವಾಗಿದೆ ಎಂದು ಹೇಳಿದರು.
ಉಳುವವನಿಗೆ ಭೂಮಿ ಕೊಟ್ಟಿದ್ದೇವೆ. ಎ ಖಾತಾ ಇಲ್ಲದವರಿಗೆ ಬಿ ಖಾತಾ ಕೊಟ್ಟಿದ್ದೇವೆ. ಬಗರ್ ಹುಕುಂ ಸಾಗುವಳಿ ರೈತರಿಗೆ ಭೂಮಿ ನೀಡಿದ್ದೇವೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಅಕ್ರಮ ಸಕ್ರಮ ಯೋಜನೆ ಮಾಡಿದ್ದೇವೆ. ಭೂಮಿ ಯೋಜನೆ ಮೂಲಕ ರೈತರಿಗೆ ಕೇವಲ 5 ರು.ಗೆ ಖಾತಾ ದಾಖಲೆ ನೀಡಿದ್ದೇವೆ. ತಾಂಡಾ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಿ 1,11,111 ಜನರಿಗೆ ಉಚಿತವಾಗಿ ದಾಖಲೆ ಪತ್ರ ನೀಡಿದ್ದೇವೆ. ಇದೀಗ ಬೆಂಗಳೂರಿನಲ್ಲೇ ಖಾತಾ ಕ್ರಾಂತಿ ಮಾಡುತ್ತಿದ್ದೇವೆ ಎಂದರು.
ಇನ್ನು ಇ-ಖಾತಾ ಮೇಳದಲ್ಲಿ ಸಾವಿರಾರು ಜನರು ಸೇರಿದ್ದರಿಂದ, ದೀರ್ಘ ಸರತಿ ಸಾಲುಗಳು, ಪ್ರಕ್ರಿಯೆಯಲ್ಲಿ ವಿಳಂಬ ಮತ್ತು ಕೆಲವರು ಅಗತ್ಯ ದಾಖಲೆಗಳನ್ನು ತರದ ಕಾರಣ ಅನೇಕ ನಾಗರಿಕರು ತೊಂದರೆಗಳನ್ನು ಎದುರಿಸಿದರು.
ಇ-ಖಾತಾ ಪ್ರಕ್ರಿಯೆಗೆ ಅಗತ್ಯವಿರುವ ನಿರ್ದಿಷ್ಟ ದಾಖಲೆಗಳ ಬಗ್ಗೆ ತಿಳಿದಿಲ್ಲದ ಕಾರಣ ಹಲವಾರು ಅರ್ಜಿದಾರರು ನೋಂದಣಿಯನ್ನು ಪೂರ್ಣಗೊಳಿಸದೆ ಹಿಂತಿರುಗಬೇಕಾಯಿತು.
ಈ ನಡುವೆ ನೋಂದಣಿಗೆ ತೆಗೆದುಕೊಂಡ ಸಮಯದ ಬಗ್ಗೆ ಆಸ್ತಿ ಮಾಲೀಕರೊಬ್ಬರು ದೂರು ನೀಡಿದರು. ನಾನು ನೋಂದಣಿಗಾಗಿ ನನ್ನ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಆದರೆಸ ಎಲ್ಲರೂ ಕನಿಷ್ಠ 30 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸುಮಾರು ಒಂದು ಗಂಟೆಯಾಗಿದೆ. ಸರ್ವರ್‌ನಲ್ಲಿ ಕೆಲವು ಸಮಸ್ಯೆ ಇದೆ ಎನ್ನುತ್ತಿದ್ದಾರೆ. ಹೀಗಾಗಿ ಕಾದು ಕುಳಿತಿದ್ದೇನೆಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement