
ಬೆಂಗಳೂರು: ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಆಗ್ತಿಲ್ಲ ಎಂದು ಇತ್ತೀಚಿಗೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದ ಉದ್ಯಮಿ ಮೋಹನ್ ದಾಸ್ ಪೈ, ಇದೀಗ ದಿಢೀರ್ ಉಲ್ಟಾ ಹೊಡೆದಿದ್ದು, ಡಿಕೆ ಶಿವಕುಮಾರ್ ಪರ ಅಚ್ಚರಿಯ ಮಾತುಗಳನ್ನಾಡಿದ್ದಾರೆ.
ಹೌದು. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಇಂದು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸರ್ವಿಸಸ್ ಸಂಸ್ಥೆ ಮುಖ್ಯಸ್ಥ ಹಾಗೂ ಇನ್ಫೋಸಿಸ್ ಮಾಜಿ CFO ಟಿ ವಿ ಮೋಹನ್ ದಾಸ್ ಪೈ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೋಹನ್ ದಾಸ್ ಪೈ, ಡಿಕೆ ಶಿವಕುಮಾರ್ ಉತ್ತಮ ಸಚಿವರು, ಬೆಂಗಳೂರಿನ ಪುಟ್ ಪಾತ್, ರಸ್ತೆ, ಮೆಟ್ರೋ ಅಭಿವೃದ್ಧಿ ಸೇರಿದಂತೆ ಅವರೊಂದಿಗೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಇನ್ನೂ ಆರು ತಿಂಗಳಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಅವರು ಬೆಂಗಳೂರಿನ ಹಿರೋ ಆಗಬೇಕು ಎಂದರು.
ಭಾರತದಲ್ಲಿ ಯಾವುದೇ ಸಿಟಿಯಲ್ಲಿ ಅಭಿವೃದ್ಧಿ ಬಗ್ಗೆ ನಮ್ಮ ಸಲಹೆ ಕೇಳಿಲ್ಲ. ಇಲ್ಲಿ ನಾವು ಹೇಳಿದರೆ, ಕರೆದು ಅಭಿಪ್ರಾಯಪಡೀತಾರೆ. ಇಷ್ಟು ಸಾಮರಸ್ಯ ಬೇರೆ ಯಾವ ನಗರದಲ್ಲಿ ಇಲ್ಲ. ಕನ್ನಡಿಗರಿಗೆ ಒಳ್ಳೆಯ ಕೆಲಸ ಸಿಗಬೇಕು. ಬೆಂಗಳೂರು ಅಭಿವೃದ್ಧಿ ಆಗಬೇಕು ಎಂದರು.
ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೆ. ಎಲ್ಲ ಸರ್ಕಾರ ಇದ್ದಾಗ ಮಾತನಾಡಿದ್ದೇನೆ. ಎಲ್ಲ ಮುಖ್ಯಮಂತ್ರಿಗಳು ನನ್ನ ಕರೆದು ಅಭಿಪ್ರಾಯ ಕೇಳಿದ್ದಾರೆ. ಬೆಂಗಳೂರು ನಗರ ಅಂತರಾಷ್ಟ್ರೀಯ ಗಮನಸೆಳೆದಿದೆ. ಇದು ನಮ್ಮ ನಗರ ಹೀಗಾಗಿ ನಾವು ಮಾತನಾಡಿದ್ದೇವೆ ಎಂದು ಮೋಹನ್ ದಾಸ್ ಪೈ ತಿಳಿಸಿದರು.
Advertisement