
ಬೆಂಗಳೂರು: ಗುಜರಾತ್‌ನ ಜುನಾಗಢ ಜಿಲ್ಲೆಯ ಸಸಾನ್‌ನಲ್ಲಿ ಸೋಮವಾರ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ (NBWL) 7ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಲವಾರು ವನ್ಯಜೀವಿ ಸಂರಕ್ಷಣಾ ಯೋಜನೆಗಳ ಜೊತೆಗೆ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಹೆಬ್ಬಕ ಪಕ್ಷಿ) ಪಕ್ಷಿಗಳ ಸಂಖ್ಯೆ ಹೆಚ್ಚಿಸಲು ಸೂಚನೆಗಳನ್ನು ನೀಡಿದ್ದು, ಇದು ಅಳಿವಿನಂಚಿನಲ್ಲಿರುವ ಪಕ್ಷಿಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಕರ್ನಾಟಕದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳ ಭರವಸೆ ಹೆಚ್ಚಾಗುವಂತೆ ಮಾಡಿದೆ.
ನಿನ್ನೆಯಷ್ಟೇ ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ 7ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಮೋದಿಯವರು, ವನ್ಯಜೀವಿ ಸಂರಕ್ಷಣೆಯಲ್ಲಿ ಸರ್ಕಾರ ಕೈಗೊಂಡಿರುವ ವಿವಿಧ ಉಪಕ್ರಮಗಳನ್ನು ಪರಿಶೀಲನೆ ನಡೆಸಿದರು.
ಪ್ರಾಜೆಕ್ಟ್ ಟೈಗರ್, ಪ್ರಾಜೆಕ್ಟ್ ಎಲಿಫೆಂಟ್, ಪ್ರಾಜೆಕ್ಟ್ ಸ್ನೋ ಲೆಪರ್ಡ್ ಮುಂತಾದ ನಿರ್ದಿಷ್ಟ ಪ್ರಮುಖ ಕಾರ್ಯಕ್ರಮಗಳ ಬಗ್ಗೆ ಪರಾಮರ್ಶೆ ನಡೆಸಿದರು. ಡಾಲ್ಫಿನ್‌ಗಳು ಮತ್ತು ಏಷ್ಯಾದ ಸಿಂಹಗಳ ಸಂರಕ್ಷಣಾ ಕ್ರಣ ಮತ್ತು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ಸ್ ಅಲೈಯನ್ಸ್ ಸ್ಥಾಪನೆಯ ಬಗ್ಗೆಯೂ ಮಂಡಳಿಯಲ್ಲಿ ಚರ್ಚೆ ನಡೆಸಲಾಯಿತು.
ಸಭೆ ವೇಳೆ ಮೋದಿಯವರು ದೇಶದ ಮೊಟ್ಟಮೊದಲ ನದಿ ತೀರದ ಡಾಲ್ಫಿನ್ ಅಂದಾಜು ವರದಿಯನ್ನು ಬಿಡುಗಡೆ ಮಾಡಿದರು. ವರದಿಯ ಪ್ರಕಾರ ದೇಶದಲ್ಲಿ ಒಟ್ಟು 6,327 ಡಾಲ್ಫಿನ್‌ಗಳಿವೆ ಎಂದು ತಿಳಿಸಲಾಗಿದೆ. ಎಂಟು ರಾಜ್ಯಗಳಲ್ಲಿ 28 ನದಿಗಳ ಸಮೀಕ್ಷೆ ನಡೆಸಲಾಗಿದ್ದು, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಡಾಲ್ಫಿನ್ ಗಳು ಕಂಡುಬಂದಿವೆ. ನಂತರದ ಸ್ಥಾನಗಳಲ್ಲಿ ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿವೆ ಎಂದು ತಿಳಿದುಬಂದಿದೆ.
ವರದಿ ಬಿಡುಗಡೆ ಬಳಿಕ ಮಾತನಾಡಿದ ಮೋದಿಯವರುಸ ಡಾಲ್ಫೀನ್ ಗಳ ಸಂರಕ್ಷಣೆ ಕುರಿತು ಜನ ಜಾಗೃತಿ ಮೂಡಿಸಬೇಕು ಮತ್ತು ಸ್ಥಳೀಯ ಜನತೆ ಮತ್ತು ಗ್ರಾಮೀಣ ಸಮುದಾಯವನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಡಾಲ್ಫೀನ್ ಆವಾಸ ಸ್ಥಾನಗಳಿಗೆ ಶಾಲಾ ಮಕ್ಕಳ ಪ್ರವಾಸವನ್ನು ಹಮ್ಮಿಕೊಳ್ಳುವಂತೆಯೂ ಮೋದಿಯವರು ಸಲಹೆ ನೀಡಿದರು.
ಬಳಿಕ ಮೋದಿಯವರು ಜುನಾಗಢದಲ್ಲಿ ರಾಷ್ಟ್ರೀಯ ವನ್ಯಜೀವಿ ಚಿಕಿತ್ಸಾ ಕೇಂದ್ರಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಏಷ್ಯಾ ವಲಯದ ಸಿಂಹಗಳ ಸಂಖ್ಯೆ ಸಮೀಕ್ಷೆಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. 2020ರಲ್ಲಿ ಈ ಸಮೀಕ್ಷೆ ನಡೆದಿತ್ತು.. 2025ರಲ್ಲಿ ಮತ್ತೆ ಸಮೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ಘೋಷಿಸಿದರು. ಬಳಿಕ ಗ್ರೇಟ್ ಇಂಡಿಯನ್ ಬಸ್ಟರ್ಡ್ ಸಂರಕ್ಷಣೆಗೆ ಕ್ರಿಯಾ ಯೋಜನೆ ಹಾಗೂ ಕಾರ್ಯಪಡೆ ರಚಿಸುವಂತೆ ಸೂಚನೆ ನೀಡಿದರು.
ಈ ಪ್ರಯತ್ನದಲ್ಲಿ ಕರ್ನಾಟಕದೊಂದಿಗೆ ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶವನ್ನು ಸೇರಿಸಲು ಸೂಚಿಸಿದರು. ಇದಕ್ಕೆ ರಾಜ್ಯದ ಅರಣ್ಯಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
2024 ರ ಆಗಸ್ಟ್ ತಿಂಗಳಿನಲ್ಲಿ ಬಳ್ಳಾರಿಯ ಸಿರುಗುಪ್ಪದಲ್ಲಿ 2 ಗ್ರೇಟ್ ಇಂಡಿಯನ್ ಬಸ್ಟರ್ಡ್ (GIB) ಪಕ್ಷಿಗಳು ಕಂಡು ಬಂದಿತ್ತು. ಆದರೆ, ಈ ವರ್ಷ ಬೀದರ್ ನಲ್ಲಿ ಒಂದು ಮಾತ್ರ ಕಾಣಿಸಿಕೊಂಡಿದೆ. ಭಾರತದಲ್ಲಿ ಈ ಪಕ್ಷಿ ಅಳಿವಿನಂಚಿನಲ್ಲಿದೆ. ಆವಾಸ್ಥಾನ ನಷ್ಟ, ಸಂಚಾರ ದಟ್ಟಣೆ, ಬೇಟೆಗಳಿಂದಾಗಿ ಈ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಪಕ್ಷಿಗಳು ಸಂಪೂರ್ಣವಾಗಿ ನಾಶವಾಗುವುದಕ್ಕೂ ಮುನ್ನ ಅವುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಿದೆ ಎಂದು ವನ್ಯಜೀವಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜಸ್ಥಾನವು GIB ಸಂತಾನೋತ್ಪತ್ತಿ ಕೇಂದ್ರವನ್ನು ಸ್ಥಾಪಿಸಿದೆ. ರಾಜ್ಯದಲ್ಲಿ ಈ ಪಕ್ಷಿಗಳ ಸಂಖ್ಯೆ ಹೆಚ್ಚಿಸಲು ಈ ಕೇಂದ್ರದಿಂದ ಪಕ್ಷಿಗಳನ್ನು ಪಡೆಯಲು ಕರ್ನಾಟಕ ಎದುರು ನೋಡುತ್ತಿದೆ. ರಕ್ಷಣಾ ಸಂರಕ್ಷಣಾ ಯೋಜನೆಗಳನ್ನು ಕೈಗೊಳ್ಳುವ ಮೊದಲು ಈ ಪಕ್ಷಿಗಳ ಆವಾಸ್ಥಾನಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಈ ಪಕ್ಷಿಗಳನ್ನು ಪುನರುಜ್ಜೀವನಗೊಳಿಸಲು ಕನಿಷ್ಠ 300-400 ಚದರ ಕಿ.ಮೀ. ಸಂರಕ್ಷಿತ ಹುಲ್ಲುಗಾವಲು ಪ್ರದೇಶದ ಅಗತ್ಯವಿದೆ. ಆ ಪ್ರದೇಶವು ದನ, ನಾಯಿಗಳು ಮತ್ತು ಮಾಂಸಾಹಾರಿಗಳಿಂದ ಮುಕ್ತವಾಗಿರಬೇಕೆಂದು ತಜ್ಞರು ಹೇಳಿದ್ದಾರೆ.
ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಗೆ ಎದೆ, ಕುತ್ತಿಗೆ ಭಾಗದಲ್ಲಿ ತೆಳು ಹಳದಿ ಬಣ್ಣ, ಬೆನ್ನು, ರೆಕ್ಕೆಗಳು ಗಾಢ ಕಂದು ಬಣ್ಣದಿರುತ್ತವೆ. ಉಷ್ಟ್ರಪಕ್ಷಿಯಷ್ಟು ಶರೀರ ಮತ್ತು ಉದ್ಧ ಕತ್ತು ಕಾಲುಗಳನ್ನು ಹೊಂದಿದ್ದು, ಅಪಾಯ ಎದುರಾದಾಗ ಹಾರುವ ಸಾಮರ್ಥ್ಯ ಹೊಂದಿದೆ. ಹುಳುಗಳು, ಹುಲ್ಲಿನ ತೆನೆ, ಹಲ್ಲಿ, ಕಪ್ಪೆ, ಆಹಾರ ಧಾನ್ಯ, ಸಸ್ಯದ ಚಿಗುರು ತಿಂದು ಬದುಕುತ್ತದೆ. ಈ ಪಕ್ಷಿಗಳು ಸೀಮಿತ ದೃಷ್ಟಿ ಹೊಂದಿದ್ದು, ಕಡಿಮೆ ಅಂತರದಲ್ಲಿ ಹಾರುವ ಹಕ್ಕಿಗಳಾಗಿವೆ. ಈ ಪಕ್ಷಿಗಳ ಮೇಲೆ ವಿದ್ಯುತ್ ತಂತಿ, ಮೊಬೈಲ್ ಟವರ್ ಗಳು ಹಾಗೂ ಬೇಟೆ ಅತ್ಯಂತ ಪರಿಣಾಮ ಬೀರಿದ್ದು, ಅವುಗಳ ಸಂತತಿ ಕಡಿಮೆಯಾಗಿದೆ. ಹೀಗಾಗಿ ಯೋಜನೆಗೂ ಮೊದಲು ಸರ್ಕಾರ ಈ ಪಕ್ಷಿಗಳ ಆವಾಸಸ್ಥಾನಗಳನ್ನು ರಕ್ಷಿಸುವಕೆಲಸ ಮಾಡಬೇಕೆಂದು ಕರ್ನಾಟಕದ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ, ಕುಮಾರ್ ಪುಷ್ಕರ್ ಅವರು ಮಾತನಾಡಿ, ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆ ಹಾಗೂ ಯೋಜನೆಗಳ ವಿವರಗಳನ್ನು ಅಧ್ಯಯನ ಮಾಡಲಾಗುತ್ತದೆ ಎಂದು ಹೇಳಿದರು.
ಅಳಿವಿನಂಚಿನಲ್ಲಿರುವ ಪಕ್ಷಿಗಳ ಪುನರುಜ್ಜೀವನಗೊಳಿಸಲು ಮತ್ತು ರಕ್ಷಿಸಲು ಎಲ್ಲಾ ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬಹುದಾದ ಹಲವು ಯೋಜನೆಗಳಲ್ಲಿ ಜಿಐಬಿ ಕೂಡ ಒಂದಾಗಿದೆ ಎಂದು ತಿಳಿಸಿದ್ದಾರೆ.
ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಗಳ ಪ್ರಕಾರ, 2010 ರಲ್ಲಿ ಮನಮೋಹನ್ ಸಿಂಗ್ ನಂತರ ಎನ್‌ಬಿಡಬ್ಲ್ಯೂಎಲ್ ಅಧ್ಯಕ್ಷತೆ ವಹಿಸಿದ ಎರಡನೇ ಪ್ರಧಾನಿ ಮೋದಿಯವರಾಗಿದ್ದಾರೆಂದು ತಿಳಿದುಬಂದಿದೆ.
Advertisement