ತುಂಗಭದ್ರಾ ಅಣೆಕಟ್ಟಿನಿಂದ ವ್ಯರ್ಥವಾಗುತ್ತಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಕ್ರಮ: ಡಿ.ಕೆ ಶಿವಕುಮಾರ್
ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿ ವ್ಯರ್ಥವಾಗುತ್ತಿರುವ 27 ಟಿಎಂಸಿ ಅಡಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿದರು.
ಕಾಂಗ್ರೆಸ್‌ನ ಬಸನಗೌಡ ಬಾದರ್ಲಿ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದ ನೀರಿನ ಸಂಗ್ರಹ ಕಡಿಮೆಯಾಗಿದೆ. 132 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯ 100 ಟಿಎಂಸಿ ಅಡಿಗೆ ಇಳಿದೆ. ಈ ಕೊರತೆ ನೀಗಿಸಲು ಕೊಪ್ಪಳ ಜಿಲ್ಲೆಯ ನವಲಿ ಹತ್ತಿರ ಸಮತೋಲನ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ನಮ್ಮ ಅಧಿಕಾರಿಗಳು ಸಮತೋಲಿತ ಅಣೆಕಟ್ಟು ನಿರ್ಮಾಣ ಮಾಡದೆ ಪರ್ಯಾಯವಾದ ಆಲೋಚನೆ ತಿಳಿಸಿದ್ದಾರೆ. ನಮ್ಮ ಪಾಲಿನ ನೀರನ್ನು ಪಂಪ್ ಮಾಡಿಕೊಂಡು ಬಳಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಇದರಿಂದ ಮೂರು ರಾಜ್ಯಗಳಿಗೆ ಉಪಯೋಗವಾಗಲಿದೆ. ನಮಗೆ ಶೇ.65 ಅವರಿಗೆ ಶೇ.35 ರಷ್ಟು ಉಪಯೋಗವಾಗಲಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣ ಹಾಗೂ ಹೊಸ ಪ್ರಸ್ತಾವನೆಗಳನ್ನು ಕೇಂದ್ರಕ್ಕೆ ಸಲ್ಲಿಸುತ್ತೇವೆ. ನಾವು ನಮ್ಮ ಪಾಲಿನ ನೀರು ಉಳಿಸಿಕೊಳ್ಳಲು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಇದೇ 18 ರಂದು ಕೇಂದ್ರ ಜಲಶಕ್ತಿ ಸಚಿವರು ಪೆನ್ನಾರ್ ನದಿ ವಿಚಾರವಾಗಿ ನಮ್ಮನ್ನು ಹಾಗೂ ತಮಿಳುನಾಡಿನವರನ್ನು ಚರ್ಚೆಗೆ ಕರೆದಿದ್ದಾರೆ. ಅಂದು ನವಲಿ ಅಣೆಕಟ್ಟು ನಿರ್ಮಾಣ ಹಾಗೂ ಪರ್ಯಾಯ ಪರಿಹಾರಗಳ ಬಗ್ಗೆ ಕೇಂದ್ರ ಸಚಿವರ ಬಳಿ ಚರ್ಚೆ ಮಾಡಲಾಗುವುದು. ಈ ವಿಚಾರವಾಗಿ ಆಂಧ್ರ ಮತ್ತು ತೆಲಂಗಾಣ ಮುಖ್ಯಮಂತ್ರಿಗಳ ಬಳಿ ಮಾತನಾಡಿ, ಪತ್ರ ಕೂಡ ಬರೆದಿದ್ದೇನೆ. ರಾಜಸ್ಥಾನದ ಉದಯಪುರಲ್ಲಿ ನಡೆದ ಸಮಾವೇಶದಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಜಲಸಂಪನ್ಮೂಲ ಸಚಿವರ ಜತೆ ಚರ್ಚೆ ಮಾಡಿದ್ದು, ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿ ಈ ಯೋಜನೆ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಿ ಚರ್ಚೆ ಮಾಡಲು ಸಮಯ ನೀಡಿ ಎಂದು ಕೇಳಿದ್ದೆ.
ಎರಡು ರಾಜ್ಯಗಳ ಜತೆ ಚರ್ಚೆ ಮಾಡಿದ ನಂತರ ತುಂಗಭದ್ರಾ ಮಂಡಳಿ ಮುಂದೆ ಈ ಯೋಜನೆಗಳ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದೆ. ಆಂಧ್ರಪ್ರದೇಶ ಸಿಎಂ ಅವರು ಈ ವಿಚಾರವಾಗಿ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿರುವ ಕಾರಣಕ್ಕೆ ಸುಮಾರು 25 ರಿಂದ 30 ಟಿಎಂಸಿ ನೀರು ನಮಗೆ ಸಿಗದೆ ವ್ಯರ್ಥವಾಗುತ್ತಿದೆ. ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಸುಮಾರು 15 ಸಾವಿರ ಎಕರೆ ಭೂಮಿ ಅಗತ್ಯವಿದೆ. ಈ ಬಗ್ಗೆ ಈಗಾಗಲೇ ತಾಂತ್ರಿಕ ವರದಿಗಳನ್ನು ತಯಾರಿಸಲಾಗಿದೆ. ಈ ಬಗ್ಗೆ ಡಿಪಿಆರ್ ಕೂಡ ತಯಾರಾಗಿದೆ. ಇದನ್ನು ತುಂಗಭದ್ರಾ ಬೋರ್ಡ್ ಹಾಗೂ ಆಂಧ್ರ, ತೆಲಂಗಾಣ ರಾಜ್ಯಗಳಿಗೂ ಕಳಿಸಲಾಗಿದೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ