ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ ಆಗಿದೆ, ಶಾಸಕರೇ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ: ಡಿ.ಕೆ ಶಿವಕುಮಾರ್ ಕಳವಳ

ಬೆಂಗಳೂರಿನ ಕೆಲವು ಶಾಸಕರು ನಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ನಾನು ಸತ್ಯಾಂಶವನ್ನೇ ಹೇಳುತ್ತಿದ್ದು, ಎಲ್ಲಾ ಪಕ್ಷದವರು ಇದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್
Updated on

ಬೆಂಗಳೂರು: ಬೆಂಗಳೂರಿನಲ್ಲಿ ಕಸ ವಿಲೇವಾರಿ ದೊಡ್ಡ ಮಾಫಿಯಾ ಆಗಿದ್ದು, ಶಾಸಕರು ನನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶುಕ್ರವಾರ ಹೇಳಿದರು.

ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್ ಅವರು ಕಸ ವಿಲೇವಾರಿಗೆ ತಡೆಯಾಗಿರುವ ಬಗ್ಗೆ ಸದನದ ಗಮನ ಸೆಳೆದರು.

ಇದಕ್ಕೆ ಉತ್ತರಿಸಿದ ಡಿಕೆ.ಶಿವಕುಮಾರ್ ಅವರು, ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದೊಂದು ದೊಡ್ಡ ಮಾಫಿಯಾ. ಇದಕ್ಕೂ ಮೊದಲು, 89 ಗುಂಪು ಮಾಡಿ ಟೆಂಡರ್‌ ಕರೆದಿದ್ದರು. ಈಗ ಅವರು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯ ಕೂಡ ಈ ವಿಚಾರವಾಗಿ ಏನು ಮಾಡಬೇಕೆಂಬ ತೀರ್ಪು ನೀಡಿಲ್ಲ. ಹೀಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಯಾವುದೇ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ.

ನಾವು ಬೆಂಗಳೂರಿನ ನಾಲ್ಕು ದಿಕ್ಕಿನಲ್ಲಿ 50 ಕಿ.ಮೀ ದೂರದ ಹೊರಗೆ ಕಸ ವಿಲೇವಾರಿಗೆ ಪ್ರಯತ್ನ ಮಾಡುತ್ತಿದ್ದವ. ಆದರೆ, ಬೆಂಗಳೂರಿನ ಕೆಲವು ಶಾಸಕರು ನಮಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ನಾನು ಅವರ ಹೆಸರು ಹೇಳಲು ಬಯಸುವುದಿಲ್ಲ. ನಾನು ಸತ್ಯಾಂಶವನ್ನೇ ಹೇಳುತ್ತಿದ್ದು, ಎಲ್ಲಾ ಪಕ್ಷದವರು ಇದ್ದಾರೆ. ಅಭಿವೃದ್ಧಿಗಾಗಿ ಅವರ ಕ್ಷೇತ್ರಕ್ಕೆ 800 ಕೋಟಿ ನೀಡಬೇಕೆಂದು ಕೇಳುತ್ತಿದ್ದಾರೆ, ಕಳೆದ ಮೂರು ದಿನಗಳಿಂದ ಮಹದೇವಪುರದಲ್ಲಿ ಕಸದ ಲಾರಿಗಳನ್ನು ನಿಲ್ಲಿಸಲಾಗಿದೆ. ಇದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದರು. ಇದೇ ವೇಳೆ ಸೋಮವಾರ ಈ ವಿಷಯದ ಬಗ್ಗೆ ವಿವರವಾದ ಉತ್ತರ ನೀಡುವುದಾಗಿಯೂ ಡಿಸಿಎಂ ತಿಳಿಸಿದರು.

ಬೆಂಗಳೂರಿನ ಹೊರವಲಯದಲ್ಲಿ 100 ಎಕರೆ ಜಾಗ ನೀಡಿದರೆ ಅದನ್ನು ಖರೀದಿ ಮಾಡಲು ಸಿದ್ಧವಿದ್ದೇವೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಪ್ರಯೋಗ ವಿಫಲವಾಗಿದೆ. ಹೀಗಾಗಿ ನಮ್ಮ ಮುಂದೆ ಇರುವ ಆಯ್ಕೆ ಅನಿಲ ಉತ್ಪಾದನೆ ಮಾತ್ರ. ಈ ವಿಚಾರದಲ್ಲಿ ಮೂರ್ನಾಲ್ಕು ಕಡೆಗಳಿಗೆ ಭೇಟಿ ನೀಡಿದ್ದು, ಇಂದೋರಿಗೂ ಭೇಟಿ ನೀಡಬೇಕಿದೆ.

ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್
ತುಂಗಭದ್ರಾ ಅಣೆಕಟ್ಟಿನಿಂದ ವ್ಯರ್ಥವಾಗುತ್ತಿರುವ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸರ್ಕಾರ ಕ್ರಮ: ಡಿ.ಕೆ ಶಿವಕುಮಾರ್

ನೈಸ್ ರಸ್ತೆ ಬಳಿ 100 ಎಕರೆ, ದೊಡ್ಡ ಬಳ್ಳಾಪುರದ ಬಳಿ ಜಮೀನು ಖರೀದಿ ಮಾಡಲಾಗುತ್ತಿದೆ. ಇನ್ನು ನಾನು ಕಸ ವಿಲೇವಾರಿ ವಿಚಾರವಾಗಿ ಟೆಂಡರ್‌ ಕರೆದಿಲ್ಲ. ಆದರೂ ಮಹಾನಾಯಕರೊಬ್ಬರು ಡಿ.ಕೆ. ಶಿವಕುಮಾರ್‌ ಈ ಯೋಜನೆಯಲ್ಲಿ 15 ಸಾವಿರ ಕೋಟಿ ಲೂಟಿ ಮಾಡಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ಬಳಿಕ ಮಾತನಾಡಿ ಎಂಎಲ್ಸಿ ಟಿಎನ್ ಜವರಾಯಿ ಗೌಡ ಅವರು, ಬೆಂಗಳೂರಿನಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ ಮತ್ತು ಪೌರಕಾರ್ಮಿಕರ ನೇಮಕಾತಿಯನ್ನು ಅವ್ಯವಸ್ಥಿತವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಈ ವಿಚಾರವಾಗಿ ನಾನು ವಿವರವಾದ ಮಾಹಿತಿ ಪಡೆಯುತ್ತೇನೆ. ಒಟ್ಟು 5 ಸಾವಿರ ಹುದ್ದೆಯನ್ನು ವಿಶೇಷ ಅಭಿಯಾನದ ಮೂಲಕ 2 ವರ್ಷ ದಿನಗೂಲಿ ಕೆಲಸ ಮಾಡಬೇಕು ಎಂದು ನೇಮಕ ಮಾಡಿಕೊಳ್ಳಲಾಗಿದೆ. ಕನ್ನಡಬಾರದವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಇಲ್ಲಿ ಈ ಕೆಲಸ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು. ಈ ವಿಚಾರವಾಗಿ ನೀವು ನನ್ನ ಗಮನ ಸೆಳೆದಿದ್ದು ಸೋಮವಾರ ಅಥವಾ ಮಂಗಳವಾರ ಇನ್ನಷ್ಟು ವಿವರವಾದ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.

ಸದಸ್ಯ ಡಿ.ಟಿ ಶ್ರೀನಿವಾಸ್ ನಗರದಲ್ಲಿ ಸ್ಕೈವಾಕರ್ ಗಳ ನಿರ್ವಹಣೆಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಗಮನ ಸೆಳೆದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಎಷ್ಟು ಸ್ಕೈವಾಕ್ ಗಳಿವೆ, ಯಾವ ಮಟ್ಟದಲ್ಲಿ, ಮುಂದೆ ಈ ವಿಚಾರವಾಗಿ ನಮ್ಮ ನೀತಿಗಳೇನು ಎಂಬುದನ್ನು ಉತ್ತರದಲ್ಲಿ ನೀಡಬೇಕಿದ್ದು, ಈ ಪ್ರಶ್ನೆಗೆ ಸೋಮವಾರ ಉತ್ತರ ನೀಡುತ್ತೇವೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com