
ಬೆಂಗಳೂರು: ಗ್ರೇಟರ್ ಬೆಂಗಳೂರು ಮಸೂದೆಗೆ ನಾಗರಿಕರ ವಿರೋಧ ವ್ಯಕ್ತವಾಗುತ್ತಿದ್ದು, ನಟ ಪ್ರಕಾಶ್ ಬೆಳವಾಡಿ ನೇತೃತ್ವದ ಟೌನ್ ಹಾಲ್ ಗುಂಪು ವೇದಿಕೆಯಡಿ ಸಭೆ ಸೇರಿರುವ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕರ್ನಾಟಕದ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಮಸೂದೆಗೆ ಅಂಕಿತ ಹಾಕದಂತೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿವಿಧ ನಾಗರಿಕ ಗುಂಪುಗಳು ಮತ್ತು ಕಾರ್ಯಕರ್ತರ ಸಮೂಹವಾದ ಬೆಂಗಳೂರು ಟೌನ್ ಹಾಲ್‌ನ ನಿಯೋಗವು ನಿನ್ನೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಗೆ ಒಪ್ಪಿಗೆ ನೀಡದಂತೆ ವಿವರವಾದ ಜ್ಞಾಪಕ ಪತ್ರವನ್ನು ಸಲ್ಲಿಸಿದೆ.
"ಇತ್ತೀಚೆಗೆ ಶಾಸಕಾಂಗದ ಉಭಯ ಸದನಗಳಲ್ಲಿ ಅಂಗೀಕರಿಸಲ್ಪಟ್ಟಿರುವ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ (ಜಿಬಿಜಿಬಿ) ಅನೇಕ ಪ್ರಜಾಪ್ರಭುತ್ವ ವಿರೋಧಿ ಮತ್ತು ಅಸಂವಿಧಾನಿಕ ನಿಬಂಧನೆಗಳನ್ನು ಒಳಗೊಂಡಿದೆ. ಈ ಮಸೂದೆಗೆ ಅಂಕಿತ ಹಾಕಬಾರದು ಎಂದು ನಾವು ನಿಮ್ಮನ್ನು ವಿನಂತಿಸುತ್ತೇವೆ" ಎಂದು ಗುಂಪು ರಾಜ್ಯಪಾಲರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ವಿವರಿಸಿದೆ.
ಅಲ್ಲದೆ ಇತ್ತೀಚೆಗೆ ಕರ್ನಾಟಕ ಸರ್ಕಾರವು ಘೋಷಿಸಿದ ಬೆಂಗಳೂರಿನ ಪ್ರಸ್ತಾವಿತ ಸುರಂಗ ರಸ್ತೆ, ಸ್ಕೈ-ಡೆಕ್ ಮತ್ತು ಎಕ್ಸ್‌ಪ್ರೆಸ್ ವೇ ಯೋಜನೆಗಳು ಸೇರಿ ಕೆಲವು ಮೂಲಸೌಕರ್ಯ ಯೋಜನೆಗಳ ಹಿನ್ನೆಲೆಯಲ್ಲಿ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಗುಂಪು ರಾಜ್ಯಪಾಲರನ್ನು ಒತ್ತಾಯಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಗುಂಪು ಜನವರಿ 10ರಂದೇ ಇಮೇಲ್ ಮೂಲಕ ಮನವಿ ಸಲ್ಲಿಸಿದೆ ಎಂದು ಹೇಳಲಾಗಿದೆ.
ತಜ್ಞರ ಸಮಿತಿ ರಚಿಸಿ
ಮನವಿ ಪತ್ರದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಪ್ರೊಫೆಸರ್ ಆಶಿಷ್ ವರ್ಮಾ ಅವರ ವಿಸ್ತೃತ ವರದಿ ಹಾಗೂ ತಜ್ಞ ಅಭಿಪ್ರಾಯಗಳೂ ಸೇರಿಕೊಂಡಿವೆ. ಆದರೆ ಕರ್ನಾಟಕ ಸರ್ಕಾರ ಇದಕ್ಕೆ ಸ್ಪಂದಿಸುವುದಾಗಲೀ, ಏನು ಕ್ರಮ ಜರುಗಿಸುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ ಎಂದು ಗುಂಪು ಟೀಕಿಸಿದೆ. ಕರ್ನಾಟಕ ಮುನಿಸಿಪಾಲಿಟೀಸ್ ಕಾಯ್ದೆ, ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆ, ಗ್ರೇಟರ್ ಬೆಂಗಳೂರು ಮಸೂದೆಗಳಲ್ಲಿರುವ ಅಂಶಗಳನ್ನು ಪರಿಶೀಲಿಸುವುದಕ್ಕೆ ತಜ್ಞರ ಸಮಿತಿ ರಚಿಸಬೇಕು ಎಂದು ಗುಂಪು ಆಗ್ರಹಿಸಿದೆ.
ಕಾನೂನು ಹೋರಾಟಕ್ಕೆ ತೀರ್ಮಾನ
ಅಂತೆಯೇ ಬೆಂಗಳೂರಿನ ನಾಗರಿಕ ಸಂಘಟನೆಗಳು ಪ್ರಸ್ತಾವಿತ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಪ್ರಶ್ನಿಸಲು ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿವೆ. ವಿಧಾನಮಂಡಲದ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ 'ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ- 2024'ರ ವಿರುದ್ಧ ಕಾನೂನು ಹೋರಾಟ ನಡೆಸಲು 'ಬೆಂಗಳೂರು ಟೌನ್‌ಹಾಲ್' ಸಂಘಟನೆ ತೀರ್ಮಾನವನ್ನು ಮಾಡಿದ್ದು, ಬೆಂಗಳೂರು ಟೌನ್ ಹಾಲ್' ಬ್ಯಾನರ್ ಅಡಿಯಲ್ಲಿ ಬಹು ನಾಗರಿಕ ಗುಂಪುಗಳು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು (GBGB) ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಿದ್ಧತೆ ನಡೆಸುತ್ತಿರುವುದರಿಂದ ಬೆಂಗಳೂರಿನ ನಾಗರಿಕ ಚಟುವಟಿಕೆಗಳು ವೇಗವಾಗಿ ನಡೆಯುತ್ತಿವೆ ಎನ್ನಲಾಗಿದೆ.
ನಟ ಪ್ರಕಾಶ್ ಬೆಳವಾಡಿ ಮಾತು
ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಧ್ವನಿ ಎತ್ತಿರುವ ನಟ ಪ್ರಕಾಶ್ ಬೆಳವಾಡಿ ಅವರು, 'ಬೆಂಗಳೂರು ನಗರ ಆಡಳಿತ ಮತ್ತು ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಆತುರದ ಮತ್ತು ಪ್ರಜಾಪ್ರಭುತ್ವ ವಿರೋಧಿ ಘೋಷಣೆಯಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, 74 ನೇ ತಿದ್ದುಪಡಿಯ ಸಾಂವಿಧಾನಿಕ ನಿಬಂಧನೆಗಳನ್ನು ದುರ್ಬಲಗೊಳಿಸುವ ಜಿಬಿಜಿ ಮಸೂದೆಯ ಮೇಲೆ ನಮ್ಮ ತಕ್ಷಣದ ಗಮನವನ್ನು ಕೇಂದ್ರೀಕರಿಸಿ, ಬೆಂಗಳೂರು ಟೌನ್ ಹಾಲ್ ನಮ್ಮ ನಗರಕ್ಕಾಗಿ ಸರ್ಕಾರ ಕೈಗೊಂಡಿರುವ ದುರುದ್ದೇಶಪೂರಿತ ಯೋಜನೆಗಳ ಕುರಿತು ತುರ್ತು ನ್ಯಾಯಾಲಯದ ಹಸ್ತಕ್ಷೇಪವನ್ನು ಕೋರಲು ತನ್ನ ಮುಂದಿನ ಸಭೆಯನ್ನು ಕರೆದಿದೆ. ನ್ಯಾಯಾಲಯಕ್ಕೆ ಹೋಗುವ ನಿರ್ಣಯವನ್ನು ತಲುಪುವುದು ನಮ್ಮ ತಕ್ಷಣದ ಉದ್ದೇಶವಾಗಿದೆ' ಎಂದು ಬರೆದುಕೊಂಡಿದ್ದಾರೆ.
ಏನಿದು ಗ್ರೇಟರ್ ಬೆಂಗಳೂರು ಮಸೂದೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಗರಿಷ್ಠ ಏಳು ನಗರ ನಿಗಮಗಳಾಗಿ ವಿಭಜಿಸುವ ಮೂಲಕ ಪುನರ್ರಚಿಸಲು ಮಸೂದೆ ಪ್ರಸ್ತಾಪಿಸುತ್ತದೆ. ಇದು ಸಮನ್ವಯ ಮತ್ತು ಮೇಲ್ವಿಚಾರಣೆಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆ ಮತ್ತು ಮೇಯರ್ ಮತ್ತು ಉಪ ಮೇಯರ್‌ಗೆ 30 ತಿಂಗಳ ಅವಧಿಯನ್ನು ಒದಗಿಸುತ್ತದೆ.
ಮುಖ್ಯಮಂತ್ರಿಗಳು ಪದನಿಮಿತ್ತ ಅಧ್ಯಕ್ಷರಾಗಿ ಜಿಬಿಎಗೆ ನೇತೃತ್ವ ವಹಿಸಲಿದ್ದು, ಬೆಂಗಳೂರಿನ ಅಭಿವೃದ್ಧಿಯ ಉಸ್ತುವಾರಿ ಹೊಂದಿರುವ ಸಚಿವರು ಪದನಿಮಿತ್ತ ಉಪಾಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಮಹಾನಗರದ ಆಡಳಿತದಲ್ಲಿ ಇರುವ ಸವಾಲುಗಳನ್ನು ನಿರ್ವಹಿಸುವ ಉದ್ದೇಶದಿಂದ ವಿಧಾನಮಂಡಲದ ಜಂಟಿ ಸಮಿತಿಯ ಪರಿಶೀಲನೆ ಬಳಿಕ ಅಂತಿಮಗೊಳಿಸಿರುವ 'ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ'ಗೆ ವಿಧಾನ ಮಂಡಲದ ಉಭಯ ಸದನಗಳು ಅಂಗೀಕಾರವನ್ನು ಸಹ ನೀಡಿದೆ. ಇದು ಬೆಂಗಳೂರಿನ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರುವ ಪ್ರಸ್ತಾವ ಈ ಮಸೂದೆಯಲ್ಲಿ ಇದೆ.
Advertisement