
ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರು ತಮಗೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡಬೇಕು ಎಂದು ಕೇಳಿಕೊಂಡ ಘಟನೆ ನಡೆದಿದೆ.
ವಿಧಾನಸಭೆಯಲ್ಲಿ ಬಜೆಟ್ ಕುರಿತ ಚರ್ಚೆ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿ ಮಾತನಾಡಿದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು, 'ನನಗೆ ಜೀವ ಬೆದರಿಕೆ ಇದೆ. ರಕ್ಷಣೆ ಕೊಡಿ. ನಾನು ವಿಧಾನಸೌಧದಿಂದ ಮನೆಗೆ ಹೋಗಲು ಜೀವಕ್ಕೆ ರಕ್ಷಣೆ ಕೊಡಿ ಎಂದು ಸ್ಪೀಕರ್ ಗೆ ಮನವಿ ಮಾಡಿದರು.
'ನನಗೆ ರಕ್ಷಣೆ ಕೊಡಿ ಅಂತ ಪೋಲಿಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಗುಪ್ತಚರ ಇಲಾಖೆ ಹೇಮಂತ್ ನಿಂಬಾಳ್ಕರ್‌ಗೂ ಮನವಿ ಮಾಡಲಾಗಿದೆ. ಆದರೂ ರಕ್ಷಣೆಗೆ ಸಿಬ್ಬಂದಿ ಕೊಟ್ಟಿಲ್ಲ. ರಕ್ಷಣೆ ಕೊಡುವ ಭರವಸೆ ನೀಡಿದರೆ ನಾನು ಮನೆಗೆ ಹೋಗುತ್ತೇನೆ’ ಎಂದು ಆಗ್ರಹಿಸಿದರು.
ಈ ವೇಳೆ ಸಚಿವ ಕೃಷ್ಣ ಬೈರೇಗೌಡ, “ಯಾವ ವಿಷಯದ ಮೇಲೆ ಮಾತನ್ನಾಡಬೇಕು ಎಂಬುದಕ್ಕೆ ಮೊದಲು ಬರಹ ದಲ್ಲಿ ಕೊಡಿ’ ಎಂದರು. ಆಗ, ಮುನಿರತ್ನ ನೆರವಿಗೆ ಧಾವಿಸಿದ ವಿಪಕ್ಷದ ಅಶೋಕ, ಸುನೀಲ್ ಕುಮಾರ್, “ಗನ್‌ಮ್ಯಾನ್ ವಾಪಸ್ ಬಗ್ಗೆ ಮಾತನಾಡುತ್ತಿದ್ದಾರೆ. ಒಬ್ಬ ಶಾಸಕ ಜೀವ ರಕ್ಷಣೆಗಾಗಿ ಅಂಗಲಾಚುತ್ತಿದ್ದಾರೆ’ ಎಂದರು.
“ಪೋಲಿಸ್ ರಕ್ಷಣೆ ಬಗ್ಗೆ ಹೇಳಿದ್ದೀರಿ ಬರಹದಲ್ಲಿ ಕೊಡಿ, ಮಾತನಾಡಲು ಅವಕಾಶ ಕೊಡುತ್ತೇನೆ’ ಎಂದು ಸ್ಪೀಕರ್ ಭರವಸೆ ನೀಡುವ ಮೂಲಕ ಚರ್ಚೆಗೆ ತೆರೆ ಎಳೆದರು.
ಕುಸುಮಾ ಶಾಸಕಿಯನ್ನಾಗಿ ಮಾಡಲು ನನ್ನ ಕೊಲೆಗೆ ಯತ್ನ
ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಮುನಿರತ್ನ, 'ಡಿಕೆ ಶಿವಕುಮಾರ್, ಡಿ.ಕೆ ಸುರೇಶ್, ಹನುಮಂತರಾಯ ಕುಸುಮಾರಿಂದ ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ. ನಾಲ್ವರು ಸೇರಿ 6 ತಿಂಗಳಿಂದ ಕೊಲೆ ಸಂಚು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಕುಸುಮಾರನ್ನು ಶಾಸಕರನ್ನಾಗಿ ಮಾಡಲು ತಮ್ಮ ಕೊಲೆಗೆ ಸಂಚುರೂಪಿಸಲಾಗಿದೆ. ಮೊಟ್ಟೆ ಹೊಡೆಯೋದು ನನ್ನ ಕಾರಿಗೆ ಕಲ್ಲು ಹೊಡೆಯೋದು. ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಹಿಂಸೆ ಕೊಡುತ್ತಾರೆ. ಡಿಕೆ ಶಿವಕುಮಾರ್ ಅವರು ಅವನು ಸತ್ತರೂ ಸರಿ ಗನ್ ಮ್ಯಾನ್ ಕೊಡಬೇಡಿ ಎಂದಿದ್ದಾರೆ. ಹೇಗಿದ್ರೂ ಸಾಯಿಸ್ತಾರೆ. ಹೋರಾಡಿಯೇ ಸಾಯುತ್ತೇನೆ ಎಂದು ಮುನಿರತ್ನ ತಿಳಿಸಿದ್ದಾರೆ.
Advertisement