
ಬೆಂಗಳೂರು: ರಾಮನಗರ ಜಿಲ್ಲೆ ಹೆಸರು ಬದಲಾವಣೆ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಹಿನ್ನಡೆ ಅನುಭವಿಸಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ವಿಚಾರದಲ್ಲೂ ಹಿನ್ನಡೆಯಾಗಿದೆ.
ವಿಧಾನಮಂಡಲದ ಉಭಯ ಸದನಗಳ ಅಂಗೀಕಾರದ ಬಳಿಕ ಒಪ್ಪಿಗೆಗಾಗಿ ಕಳುಹಿಸಿದ್ದ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಸ್ಪಷ್ಟನೆ ಕೇಳಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು, 'ರಾಜ್ಯಪಾಲರು ಕೆಲವು ಸ್ಪಷ್ಟನೆಗಳನ್ನು ಕೋರಿ ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ. ಸ್ಪಷ್ಟನೆಗಳೊಂದಿಗೆ ಪುನಃ ಒಪ್ಪಿಗೆ ಕೋರಿ ರಾಜ್ಯಪಾಲರಿಗೆ ಕಳುಹಿಸಲಾಗುವುದು' ಎಂದರು.
2023ರ ಆಗಸ್ಟ್ ನಿಂದ ಈವರೆಗೆ 119 ಮಸೂಸೆಗಳಿಗೆ ಅಂಗೀಕಾರ ನೀಡಲಾಗಿದೆ. ಈ ಪೈಕಿ 83 ಮಸೂದೆಗಳನ್ನು ಕಾಯ್ದೆಯಾಗಿ ಜಾರಿಗೊಳಿಸಲಾಗಿದೆ. ನಾಲ್ಕು ಮಸೂದೆಗಳು ರಾಜ್ಯಪಾಲರ ಬಳಿ ಇವೆ. ಏಳು ಮಸೂದೆಗಳ ಕುರಿತು ಸ್ಪಷ್ಟೀಕರಣ ಕೇಳಿದ್ದಾರೆ. ನಾಲ್ಕು ರಾಜ್ಯಪಾಲರ ಬಳಿ ಇವೆ. ಐದು ಮಸೂದೆಗಳನ್ನು ರಾಷ್ಟ್ರಪತಿಯವರಿಗೆ ಕಳುಹಿಸಿದ್ದಾರೆ ಎಂದು ವಿವರ ನೀಡಿದರು.
ಬಿಜೆಪಿ ವಿರೋಧ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯನ್ನು ಸಣ್ಣ ನಿಗಮಗಳಾಗಿ ವಿಭಜಿಸಲು ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸ್ಥಾಪಿಸುವ ಗುರಿಯನ್ನು ಹೊಂದಿರುವ ಗ್ರೇಟರ್ ಬೆಂಗಳೂರು ಗವರ್ನೆನ್ಸ್ ಬಿಲ್ 2024 ಅನ್ನು ಕರ್ನಾಟಕದ ಬಿಜೆಪಿ ತೀವ್ರವಾಗಿ ವಿರೋಧಿಸಿದೆ. 13 ಸದಸ್ಯರ ಸಮಿತಿಯಲ್ಲಿ ಐದು ಬಿಜೆಪಿ ಶಾಸಕರು ಮತ್ತು ಜೆಡಿಎಸ್ (ಎಸ್) ಶಾಸಕರಿದ್ದರು.
ಈ ಪೈಕಿ ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್, ರಾಜಾಜಿನಗರ ಶಾಸಕ ಎಸ್ ಸುರೇಶ್ ಕುಮಾರ್, ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್, ಸಿ ವಿ ರಾಮನ್ ನಗರ ಶಾಸಕ ಎಸ್ ರಘು ಮತ್ತು ಎಂಎಲ್ ಸಿ ಎಚ್ ಎಸ್ ಗೋಪಿನಾಥ್. ಮೈಸೂರಿನ ಚಾಮುಂಡೇಶ್ವರಿಯ ಜೆಡಿಎಸ್ (ಎಸ್) ಶಾಸಕ ಜಿ ಟಿ ದೇವೇಗೌಡ ಕೂಡ ಸಮಿತಿಯ ಭಾಗವಾಗಿದ್ದರು.
Advertisement