
ಬೆಂಗಳೂರು: ರಾಜ್ಯದಲ್ಲಿ ನಕಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಅಂಕಪಟ್ಟಿ ಮಾರಾಟ ಜಾಲ ಪತ್ತೆ ಹಚ್ಚಿರುವ ಸಿಸಿಬಿ ಪೊಲೀಸರು, ಬೆಂಗಳೂರು, ಧಾರವಾಡ ಮತ್ತು ಬೆಳಗಾವಿಯಿಂದ ಮೂವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಧಾರವಾಡದ ಚೈತನ್ಯ ನಗರದ ಪ್ರಶಾಂತ್ ಗುಂಡುಮಿ ಅಲಿಯಾಸ್ ಪ್ರಶಾಂತ್ (41), ಗದಗ ಜಿಲ್ಲೆ ಲಕ್ಷ್ಮೀಶ್ವರ ನಗರದ ರಾಜಶೇಖರ್.ಎಚ್.ಬಳ್ಳಾರಿ (41) ಹಾಗೂ ಬೆಂಗಳೂರಿನ ಬನಶಂಕರಿ 3ನೇ ಹಂತದ ಶ್ರೀನಿವಾಸ ನಗರದ ಕೆ.ಜೆ.ಮೋನಿಷ್ (36) ಬಂಧಿತರಾಗಿದ್ದು, ಆರೋಪಿಗಳಿಂದ ನಕಲಿ ಅಂಕಪಟ್ಟಿ ಸೇರಿದಂತೆ ಕೆಲ ದಾಖಲೆಗಳನ್ನು ಸಿಸಿಬಿ ತಂಡ ಜಪ್ತಿ ಮಾಡಿದೆ.
ಕತ್ರಿಗುಪ್ಪೆ ಮುಖ್ಯರಸ್ತೆಯ ರಾಮ್‌ರಾವ್ ಲೇಔಟ್‌ನಲ್ಲಿರುವ ದೂರ ಶಿಕ್ಷಣ ನೀಡುವ ಅಕಾಡೆಮಿಯೊಂದಕ್ಕೆ ದೂರುದಾರ ತಮ್ಮ ಸಹೋದರನ ಮಗನನ್ನು ದಾಖಲಿಸಿದ್ದರು. ಯುವಕನಿಗೆ ಯಾವುದೇ ಪರೀಕ್ಷೆ ಬರೆಸದೇ ಅಕಾಡೆಮಿ ಮಾಲೀಕರು, ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಸಂಸ್ಥೆಯ ಹೆಸರಿನಲ್ಲಿ ಅಂಕಪಟ್ಟಿ ನೀಡಿದ್ದರು.
ಅನುಮಾನಗೊಂಡ ದೂರುದಾರರು, ಅಂಕಪಟ್ಟಿ ಪರಿಶೀಲಿಸಿದಾಗ ನಕಲಿ ಅಂಕಪಟ್ಟಿ ಎಂಬುದು ಗೊತ್ತಾಗಿದೆ. ಬಳಿಕ ಸಿಸಿಬಿಗೆ ದೂರು ನೀಡಿದ್ದಾರೆ. ದೂರು ಆಧರಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಆರೋಪಿಗಳು ಐದು ವರ್ಷದಿಂದ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದರು. ಬಂಧಿತರು 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ವಿತರಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ.
ಬನಶಂಕರಿಯಲ್ಲಿರುವ ಅಕಾಡೆಮಿ ಮೇಲೆ ದಾಳಿ ನಡೆಸಿ ಮೋನಿಷ್'ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಧಾರವಾಡ ಪ್ರಶಾಂತ್ ಮತ್ತು ಬೆಳಗಾವಿಯಲ್ಲಿರುವ ಮತ್ತೊಬ್ಬ ಆರೋಪಿ ಜತೆಗೆ ಸೇರಿಕೊಂಡು ದಂಧೆ ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿ ಪ್ರಶಾಂಶ್‌ಗೆ ಸೇರಿದ ಧಾರವಾಡ ಶ್ರೀನಗರದ ಕಚೇರಿ ಮೇಲೆ ದಾಳಿ ನಡೆಸಿ ಎರಡು ಮೊಬೈಲ್, 350ಕ್ಕೂ ಹೆಚ್ಚು ನಕಲಿ ಅಂಕಪಟ್ಟಿ ಜಪ್ತಿ ಮಾಡಿದ್ದಾರೆ.
ಆರೋಪಿ ನೀಡಿದ್ದ ನಕಲಿ ಅಂಕಪಟ್ಟಿಗಳಿಂದ ಕೆಲವು ಅಭ್ಯರ್ಥಿಗಳು ಸಾರಿಗೆ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆ ಪಡೆದಿರುವ ಜೊತೆಗೆ, ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮಾಡಿಸಿಕೊಂಡಿರುವುದು ಗೊತ್ತಾಗಿದೆ. ಅಲ್ಲದೆ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲೂ ಡಿ ದರ್ಜೆ ನೌಕರರಾಗಿ ಕೆಲಸಕ್ಕೆ ಸೇರಿಕೊಂಡಿದ್ದಾರೆ’ ಎಂದು ತಿಳಿದುಬಂದಿದೆ.
ಇದೀಗ ಅಕ್ರಮವಾಗಿ ಸರ್ಕಾರಿ ಉದ್ಯೋಗಗಳನ್ನು ಪಡೆದವರ ಬಗ್ಗೆಯೂ ಸಿಸಿಬಿ ಮಾಹಿತಿ ಪಡೆಯುತ್ತಿದ್ದು, ಈ ಮಾದರಿಯ ಅಂಕಪಟ್ಟಿ ಎಲ್ಲಿಯಾದರೂ ಸಲ್ಲಿಕೆಯಾಗಿದ್ದಲ್ಲಿ ಸಿಸಿಬಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
Advertisement