
ಬೆಂಗಳೂರು: ಪಿಸ್ತೂಲು ಹಿಡಿದು ರಾಜಾಜಿನಗರದ ಜಿಯಾಮೆಟ್ರಿ ಪಬ್‌ಗೆ ನುಗ್ಗಿದ ಕಳ್ಳನೊಬ್ಬ ಕ್ಯಾಶ್ ಕೌಂಟರ್ ಒಡೆದು, ಅದರಲ್ಲಿದ್ದ ನಗದು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಾಯತ್ರಿ ನಗರ ರಸ್ತೆಯಲ್ಲಿರುವ ಜಿಯಾಮೆಟ್ರಿ ಬ್ರೂವರಿ ಮತ್ತು ಕಿಚನ್‌ನಲ್ಲಿ ಬೆಳಗಿನ ಜಾವ 3.30 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಶಂಕಿತ ವ್ಯಕ್ತಿ ಹಿಂಬಾಗಿಲಿನಿಂದ ಪ್ರವೇಶಿಸಿ ಸುಮಾರು 50,000 ರಿಂದ 60,000 ರೂ. ನಗದು ಕದ್ದಿದ್ದಾನೆ.
'ಪಿಸ್ತೂಲು ಹಿಡಿದು ಪಬ್‌ನೊಳಗೆ ಕಳ್ಳ ನುಗ್ಗಿರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಬಾಗಿಲು ಮುಚ್ಚಿ ಬೆಳಿಗ್ಗೆ 4.30 ಯಿಂದ 5 ಗಂಟೆ ಸುಮಾರಿಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲನೆ ನಡೆಸುವ ಹೊತ್ತಿಗಾಗಲೇ ಕಳ್ಳ ಪರಾರಿಯಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾಗಳು ಸ್ವಿಚ್ ಆಫ್ ಆಗಿವೆ. ಎಫ್‌ಐಆರ್ ಆಧರಿಸಿ, ಹೆಚ್ಚಿನ ತನಿಖೆ ನಡೆಸಲಾಗುವುದು' ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸೈದುಲು ಅದಾವತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳ್ಳನ ಬಳಿ ಆಯುಧವಿತ್ತು ಎಂದು ಭದ್ರತಾ ಸಿಬ್ಬಂದಿ ಹೇಳಿದ್ದು, ಅದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ. ಕಳ್ಳ ಒಳನುಗ್ಗಿದ್ದು ನಿಜ. ಆದರೆ, ಆತನ ಕೈಯಲ್ಲಿ ಪಿಸ್ತೂಲು ಇತ್ತು ಎಂಬುದು ಇನ್ನೂ ದೃಢಪಟ್ಟಿಲ್ಲ. ಭದ್ರತಾ ಸಿಬ್ಬಂದಿ ಶಂಕಿತನನ್ನು ದೂರದಿಂದ ನೋಡಿದ್ದು, ಆತ ಮಾಸ್ಕ್ ಧರಿಸಿದ್ದ. ಕಳ್ಳ ಪಿಸ್ತೂಲು ಹಿಡಿದಿದ್ದ ಕುರಿತು ತನಿಖೆ ಮಾಡಲಾಗುವುದು' ಎಂದು ಅವರು ಹೇಳಿದರು.
ಇಡೀ ಕಟ್ಟಡವನ್ನು ಶೋಧಿಸಿದರೂ ಕಳ್ಳ ಪತ್ತೆಯಾಗಲಿಲ್ಲ. ರಾತ್ರಿ ವೇಳೆ ಅವನು ಸ್ನಾನಗೃಹ ಅಥವಾ ಅಡುಗೆಮನೆ ಮೂಲಕ ಪರಾರಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪಂಬ್ ಅನ್ನು ಬೆಳಗಿನ ಜಾವ 1.30ರ ಹೊತ್ತಿಗೆ ಮುಚ್ಚಲಾಯಿತು ಮತ್ತು ಕಳ್ಳನು ಹಿಂಬದಿ ಇರುವ ತುರ್ತು ದ್ವಾರದ ಮೂಲಕ ಪ್ರವೇಶಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಮುಂಭಾಗದಲ್ಲಿದ್ದರು. ಶಬ್ದ ಕೇಳಿ ಒಳಗೆ ಹೋಗಿ ನೋಡಿದಾಗ ಕಳ್ಳ ಬಂದಿರುವುದು ಪತ್ತೆಯಾಗಿದೆ. ಕಳ್ಳ ಹೇಗೆ ಮತ್ತು ಯಾವಾಗ ಹೊರಗೆ ಹೋದನೆಂದು ಕಾವಲುಗಾರನಿಗೆ ತಿಳಿದಿಲ್ಲ ಎಂದು ಅವರು ಹೇಳಿದರು.
ಒಬ್ಬ ವ್ಯಕ್ತಿ ಮಾತ್ರ ಬಂದಿದ್ದು, ಕ್ಯಾಶ್ ಕೌಂಟರ್ ಒಡೆದು ಹಣ ದೋಚಿದ್ದಾನೆ. ದೂರಿನ ಆಧಾರದ ಮೇಲೆ, ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತೇವೆ' ಎಂದು ಡಿಸಿಪಿ ಹೇಳಿದರು.
Advertisement