
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ದುರ್ವರ್ತನೆ ತೋರಿದ ಆಟೋ ಚಾಲಕನಿಗೆ ಬುದ್ಧಿ ಹೇಳಿದ್ದಕ್ಕೆ, ಇಬ್ಬರು ವ್ಯಕ್ತಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆಯೊಂದು ನಗರದ ಚಂದ್ರ ಲೇಔಟ್‌ನಲ್ಲಿ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ವ್ಯಕ್ತಿ ರವಿ (ಹೆಸರು ಬದಲಾಯಿಸಲಾಗಿದೆ) ಮತ್ತು ಆತನ ಸ್ನೇಹಿತ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಆರೋಪಿಗಳು ಏಕಮುಖವಾಗಿ ಆಟೋ ಚಲಾಯಿಸಿಕೊಂಡು ಬಂದು ಪ್ರಿಯದರ್ಶಿನಿ ಲೇಔಟ್‌ನ ಜಸ್ಟ್ ಬೇಕ್ ಬಳಿ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ರವಿ ಅವರು ಸಂಚಾರ ನಿಯಮ ಪಾಲಿಸುವಂತೆ ಬುದ್ಧಿ ಹೇಳಿ, ಮುಂದೆ ಸಾಗಿದ್ದಾರೆ. ಬಳಿಕ ಆರೋಪಿಗಳು ರವಿ ಅವರ ವಾಹನವನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಹತ್ಯೆಗೆ ಯತ್ನಿಸಿದ್ದಾರೆ.
ವಿಜಯನಗರದಿಂದ ನಾಗರಭಾವಿಯಲ್ಲಿರುವ ನನ್ನ ಮನೆಗೆ ಹೋಗುತ್ತಿದ್ದಾಗ ಜಸ್ಟ್ ಬೇಕ್ ಬಳಿ ನನ್ನ ಸ್ನೇಹಿತನನ್ನು ಭೇಟಿಯಾದೆ. ನಾವು ದಾರಿಯಲ್ಲಿ ಹೋಗುತ್ತಿದ್ದಾಗ ಏಕಮುಖವಾಗಿ ಆಟೋ ಬಂದಿತು. ಈ ವೇಳೆ ಸಂಚಾರ ನಿಯಮ ಪಾಲಿಸುವಂತೆ ಬುದ್ಧಿ ಹೇಳಲಾಯಿತು. ಬಳಿಕ ಆರೋಪಿಗಳು ನಮ್ಮನ್ನು ಬೆನ್ನಟ್ಟಿ ನನ್ನ ಮೇಲೆ ದಾಳಿ ಮಾಡಿದರು. ಪರಿಣಾಮ ನನ್ನ ಎಡ ಹುಬ್ಬಿನ ಕೆಳಗೆ ಮತ್ತು ಮೇಲಿನ ತುಟಿಯ ಮೇಲೆ ಆಳವಾದ ಗಾಯವಾಗಿದ್ದು, ಐದು ಹೊಲಿಗೆಗಳನ್ನು ಹಾಕಲಾಗಿದೆ.
ನನ್ನ ಮೇಲಷ್ಟೇ ಅಲ್ಲದೆ, ನನ್ನ ಸ್ನೇಹಿತನ ಮೇಲೂ ದಾಳಿ ಮಾಡಿದ್ದಾರೆ. ಆದರೆ, ಅವನಿಗೆ ಗಂಭೀರ ಗಾಯವಾಗಲಿಲ್ಲ. ಗಾಯದ ನಡುವಲ್ಲೂ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದ್ದೆ. ಬಳಿಕ ಸ್ಥಳೀಯರು ನಮ್ಮ ನೆರವಿಗೆ ಬಂದರು. ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ರವಿ ಹೇಳಿದ್ದಾರೆ.
ಘಟನೆ ಸಂಬಂಧ ಪೊಲೀಸರು ಕೊಲೆ ಯತ್ನ (ಬಿಎನ್‌ಎಸ್ 109), ಅಪಾಯಕಾರಿ ಆಯುಧಗಳಿಂದ ಗಂಭೀರ ಗಾಯಗೊಳಿಸುವುದು (ಬಿಎನ್‌ಎಸ್ 118(1)), ಕ್ರಿಮಿನಲ್ ಬೆದರಿಕೆ (ಬಿಎನ್‌ಎಸ್ 351(2)), ಮತ್ತು ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು (ಬಿಎನ್‌ಎಸ್ 352) ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಗಳನ್ನು ಇನ್ನೂ ಬಂಧಿಸಲಾಗಿಲ್ಲ, ದಾಳಿಗೊಳಗಾಗಿರುವ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement