
ಬೆಂಗಳೂರು: ಬೆಂಗಳೂರು ಮತ್ತು ತುಮಕೂರು ನಡುವೆ ಮೆಟ್ರೋ ರೈಲು ಸಂಪರ್ಕ ಯೋಜನೆಗೆ ಭಿನ್ನಾಭಿಪ್ರಾಯ ವ್ಯಕ್ತವಾಗತೊಡಗಿದೆ.
ಬೆಂಗಳೂರು ಹಾಗೂ ತುಮಕೂರು ಮಧ್ಯೆ ಮೆಟ್ರೋ (Namma Metro) ರೈಲು ಸಂಪರ್ಕ ಯೋಜನೆ ಸಂಬಂಧ ಖಾಸಗಿ ಕಂಪನಿ ಸಲ್ಲಿಸಿದ್ದ ಕಾರ್ಯಸಾಧ್ಯತಾ ಪರೀಕ್ಷಾ ವರದಿಯನ್ನು ಸರ್ಕಾರಕ್ಕೆ ಬಿಎಂಆರ್ಸಿಎಲ್ ಸಲ್ಲಿಕೆ ಮಾಡಿದ್ದು, ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಕರ್ನಾಟಕ ಸರ್ಕಾರದ ನಿರ್ಧಾರ ಮೂರ್ಖತನದಿಂದ ಕೂಡಿದ್ದು. ಅದರ ಬದಲಾಗಿ ಬೆಂಗಳೂರಿನಲ್ಲಿ ಬಾಕಿ ಇರುವ ಮೆಟ್ರೋ ಮಾರ್ಗಗಳ ಕಾಮಗಾರಿಗಳನ್ನು ಬೇಗನೆ ಪೂರ್ಣಗೊಳಿಸುವ ಮತ್ತು ಬೆಂಗಳೂರಿನೊಳಗೆ ಮೆಟ್ರೋ ಜಾಲವನ್ನು ಮತ್ತಷ್ಟು ವಿಸತರಿಸುವತ್ತ ಗಮನಹರಿಸಬೇಕು ಎಂದು ಹೇಳಿದ್ದಾರೆ.
ಮೆಟ್ರೋ ಎಂಬುದು ನಗರದೊಳಗಿನ ಸಂಪರ್ಕವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ್ದು. ತುಮಕೂರಿಗೆ ಆರ್ಆರ್ಟಿಎಸ್ ಅಥವಾ ಉಪನಗರ ರೈಲು ಯೋಜನೆ (ಸಬ್ ಅರ್ಬನ್ ರೈಲ್) ಒದಗಿಸಬೇಕು ಎಂದು ತಿಳಿಸಿದ್ದಾರೆ.
ಬಿಜೆಪಿ ನಾಯಕ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ ರಾವ್ ಕೂಡ ಯೋಜನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಮೆಟ್ರೋ ಎಂದರೇನು, ಸಬ್ ಅರ್ಬನ್, ಇಂಟರ್ ಸಿಟಿ ಹಾಗೂ ದೀರ್ಘ ದೂರ ಕ್ರಮಿಸುವ ರೈಲುಗಳ ನಡುವಣ ವ್ಯತ್ಯಾಸ ಏನು ಎಂಬುದನ್ನು ಯಾರಾದರೂ ಈ ಸರ್ಕಾರಕ್ಕೆ ಅರ್ಥ ಮಾಡಿಸುವಿರಾ? ಈ ಬೇಡಿಕೆ ಇನ್ನು ಮುಂದೆ ವಿಜಯಪುರ, ಚಿತ್ತಾಪುರ, ಬೆಳಗಾವಿಗೂ ವಿಸ್ತರಿಸಬಹುದು’ ಎಂದು ಅವರು ಹೇಳಿದ್ದಾರೆ.
ಸಂಸದ ಪಿಸಿ.ಮೋಹನ್ ಅವರು ಪೋಸ್ಟ್ ಮಾಡಿ, ಸರ್ಕಾರದ ತುಮಕೂರಿಗೆ ಮೆಟ್ರೋ ಸಂಪರ್ಕದ ಕಲ್ಪಿಸುವ ಸಲುವಾಗಿ ಅಲ್ಲ, ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.
ತುಮಕೂರಿಗೆ ಉಪನಗರ ರೈಲು ರೂ.100–150 ಕೋಟಿ/ಕಿ.ಮೀ. ವೆಚ್ಚವಾಗಲಿದೆ, ಮೆಟ್ರೋ ರೂ.350 ಕೋಟಿ/ಕಿ.ಮೀ. ವೆಚ್ಚವಾಗಲಿದೆ. ಇದರಿಂದ ರಿಯಲ್ ಎಸ್ಟೇಟ್ ಲಾಭ: ರೂ.1,000 ಕೋಟಿ. ಸರ್ಕಾರದ ಗಮನ.
ತುಮಕೂರು, ಹೊಸೂರು, ಹೊಸಕೋಟೆ ಅಥವಾ ಬಿಡದಿಗೆ ಮೆಟ್ರೋ ಸಂಪರ್ಕದ ಬಗ್ಗೆ ಇಲ್ಲ, ಇದು ರಿಯಲ್ ಎಸ್ಟೇಟ್ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ಮಾತ್ರ ಇದೆ. ರಾಜ್ಯ ಸರ್ಕಾರವು ಉಪನಗರ ರೈಲುಗಳನ್ನು ಹಳಿತಪ್ಪಿಸುವುದನ್ನು ಬಿಟ್ಟು ಬೇರೇನನ್ನೂ ನಿರ್ಮಿಸುವುದಿಲ್ಲ ಎಂದು ಟೀಕಿಸಿದ್ದಾರೆ.
Advertisement