
ಹಾಸನ: ಸಿಗರೇಟ್ ತಂದು ಕೊಡಲು ನಿರಾಕರಿಸಿದ್ದಕ್ಕೆ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನು ನಂಬಲು ಸಾಧ್ಯವಿಲ್ಲ. ಮಗನ ಸಾವಿಗೆ ನ್ಯಾಯ ಒದಗಿಸಬೇಕೆಂದು ಬೆಂಗಳೂರಿನಲ್ಲಿ ಹತ್ಯೆಯಾದ ಟೆಕ್ಕಿ ಸಂಜಯ್ ಅವರ ತಂದೆ ನಾರಾಯಣ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಸಂಜಯ್ ನಗರದಲ್ಲಿ ಕಾರು ಡಿಕ್ಕಿ ಹೊಡೆಸಿ ಟೆಕ್ಕಿ ಸಂಜಯ್ (29) ಅವರನ್ನು ಹತ್ಯೆ ಮಾಡಲಾಗಿತ್ತು. ಮಗನ ಹತ್ಯೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ನಾರಾಯಣ್ ಅವರು, ಸಾಕಷ್ಟು ಪರಿಶ್ರಮದಿಂದ ಮಗನ ಎಂಜಿನಿಯರಿಂಗ್ ಪೂರ್ಣಗೊಳಿಸಲಾಗಿತ್ತು. ಇತ್ತೀಚೆಗಷ್ಟೇ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಬೆಂಗಳೂರು ಮೂಲದ ಕಂಪನಿಯಲ್ಲಿ ಉದ್ಯೋಗ ಪಡೆದಿದ್ದ. ಇದೀಗ ಮಗನನ್ನು ಹತ್ಯೆ ಮಾಡಲಾಗಿದೆ. ಸಿಗರೇಟ್ ತಂದು ಕೊಡಲು ನಿರಾಕರಿಸಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹತ್ಯೆ ಮಾಡಿದ ಆರೋಪಿ ಪ್ರತೀಕ್ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದಿಂದ ಬಂದವನಾಗಿದ್ದಾನೆ. ಹೀಗಾಗಿ, ಡಿಕೆ.ಶಿವಕುಮಾರ್ ಅವರು ಜವಾಬ್ದಾರಿ ತೆಗೆದುಕೊಂಡು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸಣ್ಣ ಕಾರಣಕ್ಕೆ ಮಗನ ಹತ್ಯೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಜಾರಿಯಲ್ಲಿದೆಯೇ? ಪೊಲೀಸರು ಆರಂಭದಲ್ಲಿ ಅಪಘಾತ ಪ್ರಕರಣ ಎಂದು ದಾಖಲಿಸಿಕೊಂಡಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲಿಸಿದ ಬಳಿಕ ಪ್ರತೀಕ್ ನನ್ನು ಬಂಧಿಸಿತರು. ಈ ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿವೆ ಎಂದು ಹೇಳಿದ್ದಾರೆ.
ಈ ನಡುವೆ ಘಟನೆ ಸಮಯದಲ್ಲಿ ಸಂಜಯ್ ಜೊತೆಗಿದ್ದ ಹಿಂಬದಿ ಸವಾರ ಕಾರ್ತಿಕ್ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
Advertisement