
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಸಮರ್ಥತೆಯಿಂದಾಗಿ ಜನರು ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬೆಂಗಳೂರು ಅಭಿವೃದ್ಧಿ ಸಚಿವರಾದ ನಿಮಗೆ ಈ ವಿಷಯಗಳ ಬಗ್ಗೆ ಸಂವೇದನೆ ಇರಬೇಕಲ್ಲವೇ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಶಾಸಕ ಸುರೇಶ್ ಕುಮಾರ್ ಅವರು ಬುಧವಾರ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಡಿಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಬಿಡಿಎ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ, ಭೂಮಾಲೀಕರು ಮನೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಶೇ.40ರಷ್ಟು ನಿವೇಶನಗಳು ಖಾಲಿ ಉಳಿದಿದೆ. ಅಸ್ತಿತ್ವದಲ್ಲಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದ್ದರೂ, ಬಿಡಿಎಯಿಂದ ಹೊಸ ಬಡಾವಣೆಗಳ ಅಭಿವೃದ್ಧಿಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಶಿವರಾಮ ಕಾರಂತ ಬಡಾವಣೆಯಲ್ಲಿ 30 ಸಾವಿರ ನಿವೇಶನಗಳ ಹಂಚಿಕೆಗೆ ಮುನ್ನವೇ ಎರಡನೇ ಹಂತಕ್ಕೆ ಸರ್ವೆ ಶುರುವಾಗಿದೆ. ಮೊದಲ ಹಂತದಲ್ಲೇ ಕಾಮಗಾರಿ ಪೂರ್ಣಗೊಳ್ಳಲು ಮೂರು ತಿಂಗಳು ಗಡುವು ನೀಡಲಾಗಿದೆ. ನಿವೇಶನ ಹಂಚಿಕೆ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥ್ಯವಾಗದಿದ್ದರೂ, ಸುಮಾರು 12 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.
ಶಿವರಾಮ ಕಾರಂತ ಬಡಾವಣೆ ಮಾತ್ರವಲ್ಲ, ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ, ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆಗಳನ್ನು ನಿರ್ಮಿಸಲು ರೈತರಿಂದ ಪಡೆದುಕೊಂಡ ಭೂಮಿಗೆ ಇಲ್ಲಿಯವರೆಗೂ ಪರಿಹಾರ ನೀಡಿಲ್ಲ. ಬಡಾವಣೆಗಳಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಮಾಡಿಲ್ಲ, ಮೂಲಸೌಕರ್ಯಗಳಿಲ್ಲದೆ ನಿವೇಶನದಾರರು ಮನೆ ಕಟ್ಟಿಕೊಳ್ಳಬೇಕಾದ ಸ್ಥಿತಿ ಇದೆ. ಈ ಎಲ್ಲ ಬಡಾವಣೆಗಳಲ್ಲಿ ಶೇ 30ರಿಂದ 40ರಷ್ಟು ನಿವೇಶನಗಳು ಖಾಲಿ ಇವೆ. ಹೀಗಿರುವಾಗ ಹೊಸ ಬಡಾವಣೆಗಳ ನಿರ್ಮಾಣದ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಡಿಎ ಅಸ್ತಿತ್ವದಲ್ಲಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ನಂತರವೇ ಹೊಸ ಬಡಾವಣೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಬೇಕು ಮತ್ತು ಹೊಸ ಯೋಜನೆ ಪ್ರಾರಂಭಿಸುವ ಮೊದಲು ನಿವೇಶನಗಳನ್ನು ಜನರಿಗೆ ಹಸ್ತಾಂತರಿಸಬೇಕೆಂದು ಒತ್ತಾಯಿಸಿದ್ದಾರೆ.
Advertisement