
ಬೆಂಗಳೂರು: ಮಳೆ ನೀರು ಕಾರಿಗೆ ಹಾರಿದ್ದಕ್ಕೆ ಚಾಲಕನ ಬೆರಳು ಕಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಂಗಳೂರಿನ ಲುಲು ಮಾಲ್ ಅಂಡರ್ ಪಾಸ್ ಬಳಿ ನಡೆದಿದೆ.
ಬೆಂಗಳೂರಿನ ಓಕುಳಿಪುರಂ ಅಂಡರ್ ಪಾಸ್ ನಲ್ಲಿ ಮೇ 25ರಂದು ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿತ್ತು. ಮಾಗಡಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನ ನಿವಾಸಿ ಜಯಂತ್ ಶೇಖರ್ (45) ಅವರು ಪತ್ನಿ ಮತ್ತು ಅತ್ತೆಯೊಂದಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ದಂಪತಿ ಮೆಜೆಸ್ಟಿಕ್ ನಿಂದ ಲುಲು ಮಾಲ್ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು. ವೇಳೆ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ಪಕ್ಕದ ಕಾರಿಗೆ ಸಿಡಿದಿದೆ.
ಇಷ್ಟಕ್ಕೆ ಕೋಪಗೊಂಡ ಪಕ್ಕದ ಕಾರಿನ ಮಾಲೀಕ ಜಯಂತ್ ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ. ಈ ವೇಳೆ ಜಯಂತ್ ಗೊತ್ತಾಗಿಲ್ಲ ಎಂದು ಕ್ಷಮೆ ಕೇಳಿದರೂ, ಸಮಾಧಾನಗೊಳ್ಳದ ಚಾಲಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿ ಕಾರು ಅಡ್ದಗಟ್ಟಿ ನಿಲ್ಲಿಸಿದ್ದಾರೆ.
ತನ್ನ ಕಾರಿನಿಂದ ಕೆಳಗಿಳಿದು ಜಯಂತ್ ಅವರನ್ನು ಅವರ ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದಾರೆ. ಅಲ್ಲದೇ ಮುಖಕ್ಕೆ ಗುದ್ದಿ, ಅವರ ಕೈಬೆರಳನ್ನು ಕಚ್ಚಿ ವಿಕೃತಿ ಮೆರೆದಿದ್ದಾನೆ. ಇದರಿಂದ ಜಯಂತ್ ಅವರ ಬಲಗೈ ಬೆರಳಿಗೆ ಗಂಭೀರವಾದ ಗಾಯಗಳಾಗಿದ್ದು, ವೈದ್ಯರು 5 ಸ್ಟಿಚ್ ಹಾಕಿದ್ದಾರೆ. ಘಟನೆ ಸಂಬಂಧ ಜಯಂತ್ ಅವರ ಪತ್ನಿ ಪಾರ್ವತಿ ಪೊಲೀಸರಿಗೆ ದೂರು ನೀಡಿದ್ದು, ಮಾಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement