
ಬೆಂಗಳೂರು: ತಮಿಳು ನಟ ಕಮಲ್ ಹಾಸನ್ ಕನ್ನಡ ಕುರಿತ ಹೇಳಿಕೆ ವ್ಯಾಪಕ ವಿವಾದಕ್ಕೀಡಾಗಿರುವಂತೆಯೇ ಇದೇ ಮೊದಲ ಬಾರಿಗೆ ನಟ ಶಿವರಾಜ್ ಕುಮಾರ್ ವಿವಾದದ ಕುರಿತು ಮೌನ ಮುರಿದಿದ್ದಾರೆ.
ಕನ್ನಡ ಭಾಷೆ ಬಗ್ಗೆ ನಟ ಕಮಲ್ ಹಾಸನ್ (Kamal Haasan) ನೀಡಿದ ಹೇಳಿಕೆ ವಿವಾದದ ಬಗ್ಗೆ ಕೊನೆಗೂ ನಟ ಶಿವರಾಜ್‌ಕುಮಾರ್ (Shivarajkumar) ಮೌನ ಮುರಿದಿದ್ದು, ನಟ ಕಮಲ್ ರ ಹೇಳಿಕೆಯನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, 'ಕಮಲ್ ಹಾಸನ್ ಹೇಳಿದ ಮಾತನ್ನ ನಾನೇನು ಸಮರ್ಥನೆ ಮಾಡಿಕೊಳ್ಳಲ್ಲ. ಭಾಷೆ ಮಾತಾಡ್ತಿದ್ದಾರೆ ಅಂದಾಗ ನಾನು ಕೈ ತಟ್ಟಿದ್ದು ನಿಜ. ಆ ಸಂದರ್ಭದಲ್ಲಿ ಏನ್ ಮಾತಾಡ್ತಿದ್ದಾರೆ ಅಂತಾ ಗೊತ್ತಾಗ್ಲಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡ ಅಭಿಮಾನದ ಬಗ್ಗೆ ಎಲ್ಲರೂ ಮಾತಾಡ್ತಿದ್ದಾರೆ. ಕನ್ನಡ ಅಭಿಮಾನ ಏನು ಅನ್ನೋದು ನಮಗೂ ಗೊತ್ತಿದೆ. ನಾನು ಕೂಡ ಕನ್ನಡ ಅಭಿಮಾನಿ. ನಾನು ಕೂಡ ಕನ್ನಡ ಅಭಿಮಾನಿ. ಅಣ್ಣಾವ್ರ ಕನ್ನಡ ಅಭಿಮಾನ ನಿಮಗೆಲ್ಲರಿಗೂ ಗೊತ್ತೇ ಇದೆ ಎಂದು ಶಿವಣ್ಣ ಹೇಳಿದರು.
ಸ್ಪಷ್ಟನೆ
ಇದೇ ವೇಳೆ ಸ್ಟೇಜ್‌ನಲ್ಲಿ ನೀವು ಯಾಕೆ ಪ್ರಶ್ನೆ ಮಾಡ್ಲಿಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ ಉತ್ತರಿಸಿದ ಶಿವಣ್ಣ, 'ಅಂದು ನನಗೆ ಸ್ಪಷ್ಟವಾಗಿ ಕೇಳಲಿಲ್ಲ. ನೀವು ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಬೇಕು. ಕಮಲ್ ಹಾಸನ್ ಮಾತಾಡಿದ್ದನ್ನ ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಆ ಬಗ್ಗೆ ಅವರನ್ನೇ ಪ್ರಶ್ನೆ ಮಾಡಿ. ನಾನು ಎರಡನೇ ಬಾರಿ ಕ್ಲಿಪ್ಪಿಂಗ್ ಕೇಳಿದಾಗಲೇ ನನಗೆ ಗೊತ್ತಾಗಿದ್ದು ಎಂದಿದ್ದಾರೆ.
ಆ ಕಾರ್ಯಕ್ರಮದಲ್ಲಿ ಕಮಲ್ ಹಾಸನ್ ಮಾತಾಡಿದ್ದು, ನನಗೆ ಗೊತ್ತಾಗಿಲ್ಲ. ಹೀಗಾಗಿ ಚಪ್ಪಾಳೆ ತಟ್ಟಿದೆ. ಕಲಾವಿದನಾಗಿ ಭಾಷೆ ಬಗ್ಗೆ ಮಾತಾಡಿದಾಗ ಚಪ್ಪಾಳೆ ತಟ್ಟಿದ್ದೆ ಎಂದು ಹೇಳಿದ್ದಾರೆ.
Advertisement