ಬೆಳಗಾವಿ: ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ; 3,500 ರೂ ಬೆಂಬಲ ಬೆಲೆ ನಿಗದಿಗೆ ಒತ್ತಾಯ; ಬಿಜೆಪಿ ಬೆಂಬಲ; Video
ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 3,500 ರೂ. ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಸಿರು ಸೇನೆ ರೈತ ಸಂಘದ ಬ್ಯಾನರ್ ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿ ಟನ್‌ಗೆ 3,200 ರೂ ನೀಡುವ ಸಕ್ಕರೆ ಕಾರ್ಖಾನೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ.
ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಳೆದ 5 ದಿನಗಳಿಂದ ನಿರಂತರ ಅಹೋರಾತ್ರಿ ಧರಣಿ ನಡೆಸುತ್ತಿರುವ ಕಬ್ಬು ಬೆಳೆಗಾರರು, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿಕಾರಿದ್ದಾರೆ.
ಕಳೆದ 5 ದಿನಗಳಿಂದ ರೈತರು ಬಿರುಸಿನ ಗಾಳಿಯಲ್ಲೂ, ಚಳಿಯಲ್ಲೂ ಅಹೋರಾತ್ರಿ ಕುಳಿತು ಹೋರಾಟ ನಡೆಸುತ್ತಿದ್ದಾರೆ. ಕೆಲವರು ಸ್ಥಳದಲ್ಲೇ ಅಡುಗೆ, ಊಟ, ನಿದ್ದೆ ಮಾಡುತ್ತಾ ಹೋರಾಟ ಮುಂದುವರೆಸುತ್ತಿದ್ದಾರೆ.
ಗೋಕಾಕ್ ಪಟ್ಟಣದಲ್ಲಿ, ವಿದ್ಯಾರ್ಥಿಗಳು ರೈತರೊಂದಿಗೆ ಸೇರಿ ಪ್ರಮುಖ ರಸ್ತೆಗಳ ತಡೆಹಿಡಿದರು. ಇದರಿಂದ ಬೆಳಗಾವಿ, ಸವದತ್ತಿ, ಮೂಡಲಗಿ ಮತ್ತು ಯರಗಟ್ಟಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳುವಂತಾಯಿತು.
ಹಸಿರು ಬಾವುಟಗಳನ್ನು ಹಿಡಿದಿರುವ ರೈತರು, ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಸರ್ಕಾರ ರೈತರ ಹಿತಾಸಕ್ತಿಗಳನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದಿನ ಕಳೆದಂತೆ ಪ್ರತಿಭಟನಾಕಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿಭಟನಾ ಸ್ಥಳದಲ್ಲಿಯೇ ರೈತರು ತಾತ್ಕಾಲಿಕ ಅಡುಗೆ ಮನೆಗಳನ್ನು ಸ್ಥಾಪಿಸಿದ್ದು, ಪ್ರತಿಭಟನಾಕಾರರಿಗೆ ಆಹಾರ ವಿತರಿಸುತ್ತಿದ್ದಾರೆ.
ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಹಲವಾರು ರೈತ ಸಂಘಟನೆಗಳು ಆಯೋಜಿಸಿರುವ ಈ ಪ್ರತಿಭಟನೆಯಲ್ಲಿ ಬೆಳಗಾವಿ ಮತ್ತು ಹತ್ತಿರದ ಜಿಲ್ಲೆಗಳಾದ್ಯಂತ ರೈತರು ಬೃಹತ್ ಪ್ರಮಾಣದಲ್ಲಿ ಭಾಗವಹಿಸಿದ್ದಾರೆ.
ಮೂಡಲಗಿ, ರಾಯಬಾಗ್ ಮತ್ತು ಗೋಕಾಕ್ ವಕೀಲರ ಸಂಘದ ವಕೀಲರು, ವಿವಿಧ ಭಾಗಗಳ ಮಾಜಿ ಸೈನಿಕರು, ವಿವಿಧ ಸಂಸ್ಥೆಗಳ ಮಠಾಧೀಶರು ಕೂಡ ಪ್ರತಿಭಟನಾಕಾರರನ್ನು ಭೇಟಿ ಮಾಡಿ ತಮ್ಮ ಬೆಂಬಲವನ್ನು ಘೋಷಿಸಿದ್ದಾರೆ.
ಪಕ್ಷಪಾತವಿಲ್ಲದೆ ಹಲವಾರು ನಾಯಕರು ಮತ್ತು ಚುನಾಯಿತ ಪ್ರತಿನಿಧಿಗಳು ರೈತರ ಬೆಂಬಲಕ್ಕೆ ನಿಂತಿದ್ದಾರೆ. ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಇಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ತಮ್ಮ ಪಕ್ಷದ ಬೆಂಬಲವನ್ನು ನೀಡಿದರು.
ಈ ನಡುವೆ ಪ್ರತಿಭಟನಾ ನಿರತ ರೈತರು ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಟನ್‌ಗೆ 3,600 ರೂ. ಪಾವತಿಸುತ್ತಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ನ್ಯಾಯಯುತ ಬೆಲೆ ನಿಗದಿಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಭಾನುವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ, ಈ ಪ್ರಯತ್ನ ವಿಫಲವಾಯಿತು.
"ಜಿಲ್ಲಾಡಳಿತವು ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಾತುಕತೆಗಳು ತೃಪ್ತಿದಾಯಕ ನಿರ್ಧಾರವನ್ನು ಕೈಗೊಂಡಿದ್ದರೆ, ನಾವು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಕುರಿತು ಚಿಂತನೆ ನಡೆಸುತ್ತಿದ್ದೆವು. ಆದರೆ, ಅದು ಸಾಧ್ಯವಾಗಿಲ್ಲ. ಹಗಲು ರಾತ್ರಿ ಪ್ರತಿಭಟನೆ ಮುಂದುವರೆಸುತ್ತಿದ್ದೇವೆಂದು ರೈತ ಮುಖಂಡರು ಹೇಳಿದ್ದಾರೆ.


