

ಬೆಂಗಳೂರು: ತನ್ನ ಬಾಯ್ ಫ್ರೆಂಡ್ ಪ್ರೀತಿ ನಿರಾಕರಿಸಿದ ಎಂಬ ಕಾರಣಕ್ಕೆ ಮಹಿಳಾ ಟೆಕ್ಕಿಯೊಬ್ಬರು ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.
ಹೌದು.. ರಾಜಧಾನಿ ಬೆಂಗಳೂರಿನ ಹಲವು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಗುಜರಾತ್ ಮೂಲದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ರೆನೆ ಜೋಶಿಲ್ದಾ ಎಂಬಾಕೆಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ ತನ್ನ ಪ್ರಿಯಕರ ಪ್ರೀತಿ ನಿರಾಕರಿಸಿದ ಎಂಬ ಕಾರಣಕ್ಕೇ ಟೆಕ್ಕಿ ರೆನೆ ಜೋಶಿಲ್ದಾ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಳು ಎಂದು ತಿಳಿದುಬಂದಿದೆ.
ಇಷ್ಟಕ್ಕೂ ಆಗಿದ್ದೇನು?
ಪೊಲೀಸ್ ಮೂಲಗಳ ಪ್ರಕಾರ ಟೆಕ್ಕಿ ರೆನೆ ಜೋಶಿಲ್ದಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆದರೆ ಯುವಕ ಆಕೆಯ ಪ್ರೀತಿಯನ್ನು ನಿರಾಕರಿಸಿದ್ದ. ಹೀಗಾಗಿ ಯುವಕನನ್ನು ಬಾಂಬ್ ಬೆದರಿಕೆ ಕೇಸ್ ನಲ್ಲಿ ಸಿಲುಕಿಸುವ ಉದ್ದೇಶದಿಂದ ಮಹಿಳಾ ಟೆಕ್ಕಿ ಈ ಖತರ್ನಾಕ್ ಸಂಚು ರೂಪಿಸಿದ್ದಾಳೆ.
ಆಕೆ ವಿಪಿಎನ್ ಬಳಸಿ ಬೆದರಿಕೆ ಇ-ಮೇಲ್ ಕಳುಹಿಸಿರುವುದು ಪತ್ತೆಯಾಗಿದೆ. ಗೇಟ್ ಕೋಡ್ ಎಂಬ ಅಪ್ಲಿಕೇಷನ್ ಮೂಲಕ ವರ್ಚುವಲ್ ಮೊಬೈಲ್ ನಂಬರ್ ಪಡೆದು ಕೃತ್ಯ ಎಸಗಿರುವುದು ಗೊತ್ತಾಗಿದೆ. ಬಂಧಿತ ಮಹಿಳೆ ರೆನೆ ಜೋಶಿಲ್ದಾ ಬಳಿ 7 ವಾಟ್ಸ್ಆ್ಯಪ್ ಖಾತೆಗಳು ಇರುವುದು ಪತ್ತೆಯಾಗಿದೆ.
ಇದೇ ಮೊದಲೇನಲ್ಲ!
ಇನ್ನು ಮಹಿಳಾ ಟೆಕಿ ರೆನೆ ಜೋಶಿಲ್ದಾ ಕೃತ್ಯ ಇದೇ ಮೊದಲೇನಲ್ಲ.. ಈ ಹಿಂದೆಯೂ ಬಾಂಬ್ ಬೆದರಿಕೆ ಕೇಸ್ನಲ್ಲಿ ಈ ಮಹಿಳೆಯ ಬಂಧನವಾಗಿತ್ತು. ಚೆನ್ನೈ ಪೊಲೀಸರು ಬಂಧಿಸಿದ್ದರು. ಆಕೆಯ ವಿರುದ್ಧ ದೇಶದ ಹಲವೆಡೆ ಕೇಸ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೆಲವು ವಾರಗಳ ಹಿಂದೆ ಬೆಂಗಳೂರಿನ 7 ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ಇದರಿಂದ ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಆತಂಕ ಉಂಟಾಗಿತ್ತು. ಶಾಲಾ ಆವರಣಗಳಲ್ಲಿ ಪೊಲೀಸರು ಬೃಹತ್ ಮಟ್ಟದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಯಾವುದೇ ಸ್ಫೋಟಕ ವಸ್ತುಗಳು ಸಿಕ್ಕಿಲ್ಲವೆಂದು ಸ್ಪಷ್ಟಪಡಿಸಿದ್ದರು.
ಘಟನೆಯ ನಂತರ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ತನಿಖೆ ಕೈಗೊಂಡು, ಆ ಇ-ಮೇಲ್‌ಗಳ ಮೂಲವನ್ನು ಪತ್ತೆಹಚ್ಚಿದರು. ತನಿಖೆ ವೇಳೆ ಆ ಇ-ಮೇಲ್‌ಗಳು ಬೆಂಗಳೂರಿಗಷ್ಟೇ ಅಲ್ಲದೆ ಚೆನ್ನೈ, ಹೈದರಾಬಾದ್ ಮತ್ತು ಗುಜರಾತ್‌ನ ಕೆಲವು ಶಾಲೆಗಳಿಗೂ ಕಳುಹಿಸಲ್ಪಟ್ಟಿದ್ದವು ಎಂಬುದೂ ಬಹಿರಂಗವಾಗಿತ್ತು.
Advertisement