

ಯಲ್ಲಾಪುರ: ದರೋಡೆ ಯತ್ನ ವಿಫಲಗೊಂಡ ಹಿನ್ನೆಲೆಯಲ್ಲಿ ಕೋಪಗೊಂಡ ದುಷ್ಕರ್ಮಿಗಳು ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆಯೊಂದು ಯಲ್ಲಾಪುರದ ಉಮ್ಮಚ್ಗಿಯಲ್ಲಿ ನಡೆದಿದೆ.
ಬ್ಯಾಂಕಿಗೆ ಬೆಂಕಿ ಹಚ್ಚಿದ ಪರಿಣಾಮ ಬ್ಯಾಂಕ್ ಒಳಗಿದ್ದ ಕಂಪ್ಯೂಟರ್, ಸಿಸಿಟಿವಿ ಹಾಗೂ ವಿವಿಧ ದಾಖಲೆಗಳು ಸುಟ್ಟು ಕರಕಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಕರ್ನಾಟಕ ಗ್ರಾಮೀಣ ವಿಕಾಸ್ ಬ್ಯಾಂಕಿನ ಕಿಟಕಿಗಳನ್ನು ಒಡೆದು ಒಳ ಪ್ರವೇಶಿಸಿರುವ ಕಳ್ಳರು, ಕ್ಯಾಷ್ ರೂಮ್ ಬಾಗಿಲು ತೆರೆಯಲು ಯತ್ನಿಸಿದ್ದಾರೆ. ಈ ವೇಳೆ ಸೈರನ್ ಮೊಳಗಲು ಪ್ರಾರಂಭಿಸಿದೆ. ಸೈರನ್ ನಿಲ್ಲಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಸಿಕ್ಕಿಬೀಳುವ ಭಯದಿಂದ ಬ್ಯಾಂಕಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಬಳಿಕ ನೆರೆಹೊರೆಯವರು ಬ್ಯಾಂಕಿನಿಂದ ಹೊಗೆ ಬರುತ್ತಿರುವುದನ್ನು ನೋಡಿ ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಪರಿಶೀಲನೆ ನಡೆಸಿದ ಪೊಲೀಸರಿಗೆ ಬ್ಯಾಂಕಿನ ಕಿಟಕಿ ಒಡೆದಿರುವುದು, ಸಿಸಿಟಿವಿ ಮತ್ತು ಡಿಜಿಟಲ್ ರೆಕಾರ್ಡರ್ ತೀವ್ರವಾಗಿ ಹಾನಿಗೊಳಗಾಗಿರುವುದು ಪತ್ತೆಯಾಗಿದೆ.
ಕಳ್ಳರು ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಳಿಸಲು ಪ್ರಯತ್ನಿಸಿರಬಹುದು, ಇದರಿಂದಾಗಿ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಬ್ಯಾಂಕ್ ಒಳಗಿನ ಸಿಸಿಟಿವಿ ದೃಶ್ಯಾವಳಿಗಳು ಸಂಪೂರ್ಣ ಸುಟ್ಟುಹೋಗಿವೆ. ಕಂಪ್ಯೂಟರ್‌ಗಳು ಮತ್ತು ದಾಖಲೆಗಳೂ ಕೂಡ ನಾಶವಾಗಿವೆ. ಆದರೆ, ಹೊರಗಿದ್ದ ಕೆಲವು ಸಿಸಿಟಿವಿ ದೃಶ್ಯಾವಳಿಗಳು ನಮ್ಮ ಬಳಿ ಇವೆ, ಮಾಸ್ಕ್ ಧರಿಸಿದ್ದ ಪತ್ತೆಯಾಗಿದ್ದಾನೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಮತ್ತು ಯಲ್ಲಾಪುರ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ್ ಹಾನಾಪುರ್ ಸ್ಥಳಕ್ಕೆ ಭೇಟಿ ನೀಡಿ, ಬ್ಯಾಂಕ್ ಅಧಿಕಾರಿಯೊಬ್ಬರು ಸಲ್ಲಿಸಿದ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.
ದುಷ್ಕರ್ಮಿಗಳು ರಾಜ್ಯದ ಒಳಗಿನವರೇ ಅಥವಾ ಹೊರಗಿನವರೇ ಎಂಬುದರ ಪತ್ತೆಗೆ ಪ್ರಯತ್ನಿಸುತ್ತಿದ್ದೇವೆ. ಆರೋಪಿಗಳ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಸ್ಟ್ರಾಂಗ್ ರೂಮ್ ಅನ್ನು ತೆರೆಯಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement