

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶೇ.90ರಶಷ್ಟು ಕೊಳಚೆ ನೀರು ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷ ಪಿ.ಎಂ. ನರೇಂದ್ರ ಸ್ವಾಮಿ ಭಾನುವಾರ ಹೇಳಿದ್ದಾರೆ.
ನಗರದಲ್ಲಿ ಶೇ.90ರಷ್ಟು ಎಸ್‌ಟಿಪಿಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ನಗರದ ಅತಿದೊಡ್ಡ ಪರಿಸರ ವೈಫಲ್ಯಗಳಲ್ಲಿ ಒಂದಾಗಿದ್ದು, ಈ ಬಗ್ಗೆ ಕೂಡಲೇ ಗಮನ ಹರಿಸಬೇಕಿದೆ. ಘಟಕಗಳ ಪುನಃಸ್ಥಾಪಿಸಲು ಮತ್ತು ಮಾಲಿನ್ಯವನ್ನು ತಡೆಯಲು ಬಹು-ಸಂಸ್ಥೆಗಳ ಜಂಟಿ ಕ್ರಿಯಾ ತಂಡವನ್ನು ರಚಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮಯ ಕೇಳಲಾಗಿದೆ. ಸಮಯ ನೀಡಿದ್ದೇ ಆದರೆ, ಸಮಸ್ಯೆಗಳನ್ನು ವಿವರಿಸುತ್ತೇನೆಂದು ತಿಳಿಸಿದ್ದಾರೆ.
ಸಂಬಂಧ ಎಲ್ಲಾ ಅಧಿಕಾರಿಗಳಿಗೂ ಪ್ರಶ್ನೆ ಮಾಡಲಾಗಿದ್ದು, ಉತ್ತರಗಳು ಬಂದ ಕೂಡಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧಿಕಾರಿಗಳನ್ನು ಒಳಗೊಂಡ ಜಂಟಿ ಕ್ರಿಯಾ ತಂಡವನ್ನು ರಚಿಸಲು ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಯೋಜನೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (KIADB)ಯನ್ನೂ ಕೂಡ ಸೇರ್ಪಡೆಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ.
ಕೆಐಎಡಿಬಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತದೆ, ಆದರೆ, ತ್ಯಾಜ್ಯ ಸಂಸ್ಕರಣಾ ಘಟಕಗಳು ಇಲ್ಲದೆ, ಕೈಗಾರಿಕಾ ತ್ಯಾಜ್ಯ ಎಲ್ಲಿಗೆ ಹೋಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿರುವ ಕೊಳಚೆ ನೀರು ಸಂಸ್ಕರಣಾ ಘಟಕಗಳು ಈಗಾಗಲೇ ಓವರ್‌ಲೋಡ್ ಆಗಿವೆ. ಕಡಿಮೆ ಸಾಮರ್ಥ್ಯ ಹೊಂದಿದ್ದು, ಕೆಲವು ಎಸ್'ಟಿಪಿಗಳು ಕಾರ್ಯನಿರ್ವಹಿಸುತ್ತಿಲ್ಲ. ಇದೀಗ ಕೆಎಸ್‌ಪಿಸಿಬಿಯ 8 ಪ್ರಾದೇಶಿಕ ಕಚೇರಿಗಳಿಗೆ ನೇರವಾಗಿ ಸಂಪರ್ಕ ಹೊಂದಿದ ಪ್ರತಿಯೊಂದು ಎಸ್'ಟಿಪಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಮಂಡಳಿ ಯೋಜಿಸುತ್ತಿದೆ. ಈ ರೀತಿ ಮಾಡಿದರೆ ಮಾತ್ರ ನಿಯಂತ್ರಣ ಸಾಧಿಸಲು ಸಾಧ್ಯ ಎಂದು ಹೇಳಿದರು.
ಮಂಡಳಿಯು 50ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೂ ನಗರದ ವಿವಿಧ ಭಾಗಗಳಲ್ಲಿ ಸಂಸ್ಕರಿಸದ ಕೊಳಚೆನೀರು ಇನ್ನೂ ಜಲಮೂಲಗಳಿಗೆ ಹರಿಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಸಿಬ್ಬಂದಿ ಕೊರತೆ ಕುರಿತು ಮಾತನಾಡಿದ ಅವರು, ಖಾಲಿ ಇರುವ ಶೇ.80ರಷ್ಟು ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂದ್ ಮಾಡಿಸಿದ್ದರ ಕುರಿತು ಮಾತನಾಡಿ, ನಿಯಮ ಪಾಲಿಸುವುದಾಗಿ ಹಾಗೂ ಸಮಸ್ಯೆ ಸರಿಪಡುವ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ, ಅನುಮತಿ ನೀಡಲಾಗಿದೆ. ಆದರೂ ಕೆಎಸ್‌ಪಿಸಿಬಿ ಭಾರೀ ದಂಡ ವಿಧಿಸುತ್ತಿದ್ದ, 30 ಕೋಟಿ ರೂ.ಗಳಿಗಿಂತ ಹೆಚ್ಚು ವಿಧಿಸುತ್ತಿದೆ ಎಂದು ತಿಳಿಸಿದರು.
ಸುವರ್ಣ ಮಹೋತ್ಸವ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಸ್ಥಾಪನೆಯಾಗಿ 50 ವರ್ಷಗಳನ್ನು ಪೂರೈಸುತ್ತಿದ್ದು, ನವೆಂಬರ್ 18 ಮತ್ತು 19 ರಂದು ಬೆಂಗಳೂರಿನಲ್ಲಿ ಸುವರ್ಣ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಇದೇ ವೇಳೆ ನರೇಂದ್ರ ಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.
ಸಮಾರಂಭದಲ್ಲಿ ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಗಳಿಗಾಗಿ ಐವರಿಗೆ ರಾಜ್ಯ ಮಟ್ಟದ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ನವೆಂಬರ್ 18 ರಂದು ಆರ್ಥಿಕತೆ ಮತ್ತು ಸುಸ್ಥಿರತೆಯ ಕುರಿತು ವಿಚಾರ ಸಂಕಿರಣ ನಡೆಯಲಿದ್ದು, ತ್ಯಾಜ್ಯ ನೀರು ಸಂಸ್ಕರಣೆ, ಘನತ್ಯಾಜ್ಯ ನಿರ್ವಹಣೆ, ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನವೆಂಬರ್ 19 ರಂದು ಅರಮನೆ ಮೈದಾನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
Advertisement