

ಬೆಂಗಳೂರು: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 5 ಕೋಟಿ ರೂ. ಮಂಜೂರು ಮಾಡಿಸುತ್ತೇನೆಂದು ವ್ಯಕ್ತಿಯೊಬ್ಬರನ್ನು ನಂಬಿಸಿ, ಮುಂಗಡ ಕಮಿಷನ್ ಆಗಿ 50 ಲಕ್ಷ ರೂ. ಪಡೆದು ವಂಚಿಸಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಪೊಲೀಸರ ಬಂಧನಕ್ಕೊಳಪಡಿಸಿದ್ದಾರೆ.
ನಾಗರಬಾವಿ ನಿವಾಸಿ ವೆಂಕಟೇಶ್ ಬಾಬು ನೀಡಿದ ದೂರಿನನ್ವಯ ಹರೀಶ್ ಹಾಗೂ ಸಂದೀಪ್ ಎಂಬುವರರನ್ನು ಪೊಲೀಸರು ಬಂಧಿಸಿದ್ದಾರೆ.
2024ರ ಅಕ್ಟೋಬರ್ ನಲ್ಲಿ ದೂರುದಾರರ ಮನೆಗೆ ಹೋಗಿದ್ದ ಆರೋಪಿ ಹರೀಶ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಆಪ್ತ ಸಂದೀಪ್ ಎಂಬಾತನ ಪರಿಚಯವಿದೆ. ಎಂಎಲ್‌ಎ ಲೆಟರ್‌ಹೆಡ್ ಮೇಲೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಐದು ಕೋಟಿ ರು. ಬಿಡುಗಡೆ ಮಾಡಿಸಿ ಕೊಡುತ್ತೇನೆ ಎಂದು ನಂಬಿಸಿದ್ದ. ಇದಕ್ಕೆ ಶೇ.10 ರಂತೆ 50 ಲಕ್ಷ ರು.ಗೆ ಬೇಡಿಕೆ ಇಟ್ಟಿದ್ದ.
ಅದಕ್ಕೆ ಒಪ್ಪಿದ್ದ ವೆಂಕಟೇಶ್ ಬಾಬು ಅವರು, ವಂಚಕ ಹರೀಶ್‌ಗೆ 2024ರ ನವೆಂಬರ್‌ನಲ್ಲಿ 25 ಲಕ್ಷ ರು. ನೀಡಿದ್ದರು. 2025ರ ಮಾರ್ಚ್‌ನಲ್ಲಿ ಪತ್ರ ಬಿಡುಗಡೆ ಮಾಡುವುದಾಗಿ ಬಾಕಿ ಇದ್ದ 25 ಲಕ್ಷ ರೂ. ಗಳನ್ನು ಮತ್ತೊಬ್ಬ ಆರೋಪಿ ಸಂದೀಪ್‌ಗೆ ನೀಡಿದ್ದರು.
ಬಳಿಕ ಕಳೆದ ಆರು ತಿಂಗಳಿಂದ 2-3 ಬಾರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಪತ್ರಗಳನ್ನು ಆರೋಪಿಗಳು ನೀಡಿದ್ದರು. ಆದರೆ, ಹಣ ಬಿಡುಗಡೆ ಮಾಡಿಸಿರಲಿಲ್ಲ. ಹೀಗೆ ಪ್ರತಿ ಬಾರಿಯೂ ಸಬೂಬು ಹೇಳುತ್ತಿದ್ದರು.
ಅದರಿಂದ ಬೇಸತ್ತು ಕಳೆದ ಸೆ.19 ರಂದು ವೆಂಕಟೇಶ್ ಬಾಬು ಅವರು, ಆರ್‌ಡಿಪಿಆರ್‌ಕಚೇರಿಗೆ ಹೋಗಿ ವಿಚಾರಿಸಿದಾಗ ಇದು ನಕಲಿ ಪತ್ರ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಹರೀಶ್‌ಗೆ ಕರೆ ಮಾಡಿದಾಗ ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು. ನಂತರ ಸಂದೀಪ್ ಮತ್ತು ಹರೀಶ್ ವಿರುದ್ಧ ದೂರು ನೀಡಿದ್ದಾರೆ. ದೂರು ಬೆನ್ನಲ್ಲೇ ಪೊಲೀಸರ ಇಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement