

ಬೆಂಗಳೂರು: ಇಟ್ಟಿಗೆ ಕಾರ್ಖಾನೆಯೊಳಗೆ ವಿದ್ಯುತ್ ಚಾಲಿತ ತ್ರಿಚಕ್ರ ವಾಹನ ಚಲಾಯಿಸಲು ಯತ್ನಿಸುತ್ತಿದ್ದ ಒಂಬತ್ತು ವರ್ಷದ ಬಾಲಕನೊಬ್ಬ ಲಾರಿಗೆ ಡಿಕ್ಕಿ ಹೊಡೆಸಿ, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿರುವ ಘಟನೆಯೊಂದು ಅತ್ತಿಬೆಲೆ ಬಳಿಯ ಲಕ್ಷ್ಮಿಸಾಗರ ಗ್ರಾಮದಲ್ಲಿರುವ ಎಸ್‌ಆರ್‌ಟಿ ಬ್ರಿಕ್ಸ್ ಕಾರ್ಖಾನೆಯಲ್ಲಿ ನಡೆದಿದೆ.
ರವೀಂದ್ರ ಮಹ್ತೊ ಮತ್ತು ರೀನಾ ಧಾಬಿ ದಂಪತಿಯ ಪುತ್ರ ಸಜನ್ ಕುಮಾರ್ (9) ಮೃತ ಬಾಲಕ. ಬಿಹಾರ ಮೂಲದ ಕುಟುಂಬ 2 ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿತ್ತು. ರವೀಂದ್ರ ಇಟ್ಟಿಗೆ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ದಂಪತಿಗಳು ಸಜನ್ ಸೇರಿದಂತೆ ತಮ್ಮ ಮೂವರು ಮಕ್ಕಳೊಂದಿಗೆ ಕಾರ್ಖಾನೆ ಮಾಲೀಕರು ಒದಗಿಸಿದ ಶೆಡ್‌ನಲ್ಲಿ ವಾಸಿಸುತ್ತಿದ್ದರು.
ನವಂಬರ್ 8 ರಂದು ಮಧ್ಯಾಹ್ನ 12.40 ರ ಸುಮಾರಿಗೆ ದುರ್ಘಟನೆ ಸಂಭವಿಸಿದೆ. ಕಾರ್ಖಾನೆಯ ಮಾಲೀಕ ಇಟ್ಟಿಗೆಗಳನ್ನು ಸಾಗಿಸಲು ಕಾರ್ಮಿಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಒದಗಿಸಿದ್ದರು. ಶೆಡ್ ನಲ್ಲಿದ್ದ ಬಾಲಕ ಆಟವಾಡುತ್ತ ವಾಹನ ಚಲಾಯಿಸಿದ್ದಾನೆ. ಎಂಜಿನ್ ಆನ್ ಮಾಡಿ ಆಕ್ಸಿಲರೇಟರ್ ಆನ್ ಮಾಡಿದ್ದಾನೆ. ಬಳಿಕ ವಾಹನವನ್ನು ನಿಯಂತ್ರಿಸಲು ಸಾಧ್ಯವಾಗದೆ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ರವೀಂದ್ರ ಅವರು ಪುತ್ರನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಪೋಲೀಸರು ಕಾರ್ಖಾನೆ ಮಾಲೀಕ ಸುರೇಶ್ ನನ್ನು ಬಂಧನಕ್ಕೊಳಪಡಿಸಿದ್ದಾರೆ. ಈತನ ವಿರುದ್ಧ ಸೂರ್ಯನಗರ ಪೊಲೀಸರು ನಿರ್ಲಕ್ಷ್ಯದಿಂದ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾಹನವನ್ನು ದೂರ ಪಾರ್ಕ್ ಮಾಡದ ಕಾರಣ ಹಾಗೂ ಘಟನೆ ಸಮಯದಲ್ಲಿ ವಾಹನವನ್ನು ಲಾಕ್ ಮಾಡದ ಕಾರಣ ಬಾಲಕ ಸಾವನ್ನಪ್ಪಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Advertisement