

ಬೆಂಗಳೂರು: 'ಕರ್ನಾಟಕವು ಈಗ ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಜಾಗತಿಕ ಮೀನು ಉತ್ಪಾದನೆಯಲ್ಲಿ ಭಾರತದ ಪಾಲು ಸುಮಾರು ಶೇ 7.7 ರಷ್ಟಿದ್ದು, ರಫ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಹೇಳಿದ್ದಾರೆ.
ವಿಶ್ವ ಮೀನುಗಾರಿಕಾ ದಿನಾಚರಣೆಯಂದು 'ಮತ್ಸ್ಯ ಮೇಳ 2025'ದಲ್ಲಿ ಮಾತನಾಡಿದ ಅವರು, ಮೀನುಗಾರಿಕೆ ಲಕ್ಷಾಂತರ ಕುಟುಂಬಗಳಿಗೆ ಆಹಾರ ಭದ್ರತೆ, ಪೋಷಣೆ ಮತ್ತು ಜೀವನೋಪಾಯವನ್ನು ಖಾತ್ರಿಪಡಿಸುವ ನಿರ್ಣಾಯಕ ಉದ್ಯಮವಾಗಿದೆ ಎಂದು ಹೇಳಿದರು.
ಕರ್ನಾಟಕವು 32 ಕಿ.ಮೀ ಕರಾವಳಿ ಮತ್ತು 5.5 ಲಕ್ಷ ಹೆಕ್ಟೇರ್ ಒಳನಾಡಿನ ಜಲ ಸಂಪನ್ಮೂಲಗಳನ್ನು ಹೊಂದಿದ್ದು, ಮೀನು ಉತ್ಪಾದನೆಯಲ್ಲಿ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಈ ವಲಯವು ರಾಜ್ಯದಲ್ಲಿ ಸುಮಾರು 10 ಲಕ್ಷ ಜನರಿಗೆ ಆಧಾರವಾಗಿದೆ ಎಂದು ಹೇಳಿದರು.
ಈ ವಲಯಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಿಗೆ ವಾರ್ಷಿಕ ಡೀಸೆಲ್ ಕೋಟಾವನ್ನು 1.5 ಲಕ್ಷ ಕಿಲೋಲೀಟರ್‌ಗಳಿಂದ 2 ಲಕ್ಷ ಕಿಲೋಲೀಟರ್‌ಗಳಿಗೆ ಹೆಚ್ಚಿಸಲಾಗಿದೆ. ಸಾಂಪ್ರದಾಯಿಕ ದೋಣಿಗಳಿಗೆ ಲೀಟರ್‌ಗೆ 35 ರೂ. ಸಬ್ಸಿಡಿ ದರದಲ್ಲಿ ಕೈಗಾರಿಕಾ ಸೀಮೆಎಣ್ಣೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ವಾರ್ಷಿಕ ಮೀನುಗಾರಿಕೆ ನಿಷೇಧದ ಸಮಯದಲ್ಲಿ ಮೀನುಗಾರರಿಗೆ ನೀಡಲಾಗುತ್ತಿದ್ದ ಆರ್ಥಿಕ ಸಹಾಯವನ್ನು 1,500 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಮೀನುಗಾರರಿಗೆ 10,000 ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ, ರಾಜ್ಯದಾದ್ಯಂತ 10,000ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಲಾಗಿದ್ದು, ಒಳನಾಡಿನ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸಣ್ಣ ಕೆರೆಗಳನ್ನು ಸೊಸೈಟಿಗಳಿಗೆ ಹಸ್ತಾಂತರಿಸಲಾಗುವುದು. ಆದರೆ, ದೊಡ್ಡ ಕೆರೆಗಳನ್ನು ಹರಾಜು ಮಾಡಲಾಗುವುದು' ಎಂದು ಅವರು ಹೇಳಿದರು.
ಈ ವರ್ಷ 45 ಮೀನುಗಾರರ ಸಾವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಲೈಫ್ ಜಾಕೆಟ್‌ಗಳನ್ನು ವಿತರಿಸಲಿದೆ. ಆಕಸ್ಮಿಕ ಸಾವುಗಳಿಗೆ ಪರಿಹಾರವನ್ನು 10 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಮತ್ತು 24 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಗುವುದು ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
Advertisement