

ಬೆಂಗಳೂರು: ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆ ಮೂಲಕ ಪ್ರಕರಣದಲ್ಲಿನ ಒಟ್ಟಾರೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಹಾಡಹಗಲೇ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರ ಗ್ಯಾಂಗ್ ಸಿಎಂಎಸ್ ಸಂಸ್ಥೆಯ ಎಟಿಎಂ ವ್ಯಾನ್ ಮೇಲೆ ದಾಳಿ ಮಾಡಿ ಆದರೊಳಗಿದ್ದ 7.11 ಕೋಟಿ ರೂ ದರೋಡೆ ಮಾಡಿದ್ದರು.
ಅತ್ಯಂತ ಜನರಿದ್ದ ಬೆಂಗಳೂರಿನ ಹೃದಯಭಾಗದಲ್ಲೇ ನಡೆದಿದ್ದ ಈ ದರೋಡೆ ವ್ರಕರಣ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಜೆಪಿ ನಗರದ ಬ್ಯಾಂಕ್ ಶಾಖೆಯಿಂದ ವಾಹನವು ಹಣವನ್ನು ಸಾಗಿಸುತ್ತಿದ್ದಾಗ ಅಶೋಕ ಪಿಲ್ಲರ್ ಬಳಿ ಈ ಘಟನೆ ಸಂಭವಿಸಿತ್ತು.
ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ದರೋಡೆ ನಡೆದ 76 ಗಂಟೆಗಳಲ್ಲೇ ಪ್ರಕರಣದ ಪ್ರಮುಖ ಆರೋಪಿಗಳಾದ ರವಿ, ಕಾನ್ಸ್ಟೇಬಲ್ ಅಣ್ಣಪ್ಪ ನಾಯ್ಕ ಮತ್ತು ಕ್ಸೇವಿಯರ್ ಸೇರಿದಂತೆ 7 ಮಂದಿಯನ್ನು ಬಂಧಿಸಿದ್ದರು.
ಇದೀಗ ಮತ್ತಿಬ್ಬರು ಆರೋಪಗಳನ್ನು ಕೂಡ ಪೊಲೀಸರು ಬಂಧಿಸಿದ್ದ ಅದರೊಂದಿಗೆ ಪ್ರಕರಣದಲ್ಲಿನ ಒಟ್ಟಾರೆ ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದರೋಡೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದ ಗೋವಿಂದಪುರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪೊಲೀಸ್ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯಕ್ ಅವರನ್ನು ಈಗಾಗಲೇ ಕೆಲಸದಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರಂಭದಲ್ಲಿ, ನವೆಂಬರ್ 19 ರಂದು ದಕ್ಷಿಣ ಬೆಂಗಳೂರಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿತ್ತು. ಅಂತೆಯೇ ಕದ್ದ ಒಟ್ಟು ಮೊತ್ತದಲ್ಲಿ 6.29 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಂಧಿತರಲ್ಲಿ ನಗದು ಲಾಜಿಸ್ಟಿಕ್ಸ್ ಕಂಪನಿಯಾದ ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ಮಾಜಿ ಉದ್ಯೋಗಿಗಳು ಸೇರಿದ್ದಾರೆ.
Advertisement