

ಬೆಂಗಳೂರು: ಬೆಂಗಳೂರಿನ ಯುನಿವರ್ಸಿಟಿ ಆಫ್ ಹಾರ್ಟಿಕಲ್ಚರಲ್ ಸೈನ್ಸಸ್ (UHS) ನ ಜಿಕೆವಿಕೆ (GKVK) ಕ್ಯಾಂಪಸ್ ನಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆ ನಿರ್ಮಾಣ ಪ್ರಸ್ತಾವನೆಗೆ ವಿದ್ಯಾರ್ಥಿಗಳು, ರೈತ ಸಂಘಟನೆಗಳು ಮತ್ತು ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಪರ್ಯಾಯ ಭೂಮಿ ಹುಡುಕಲು ನಿರ್ಧಾರ ಕೈಗೊಂಡಿದೆ.
ಮಾರುಕಟ್ಟೆಯಿಂದ ಕ್ಯಾಂಪಸ್ ನಲ್ಲಿದ್ದ ಮರಗಳು ನಾಶವಾಗುತ್ತವೆ ಮತ್ತು ವಿದ್ಯಾರ್ಥಿಗಳ ಸುರಕ್ಷತೆಗೆ, ವಿಶೇಷವಾಗಿ ಮಹಿಳೆಯರ ಭದ್ರತೆಗೆ ಧಕ್ಕೆಯಾಗುತ್ತದೆ ಎಂದು ಪ್ರತಿಭಟನಕಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ತಾವು ವಿರೋಧವಿಲ್ಲ ಎಂದರೂ, ಸಂಶೋಧನೆಗಾಗಿ ಬೆಳೆಸಿರುವ ಮರಗಳನ್ನು ಉಳಿಸಿಕೊಳ್ಳಲು ಬಯಸುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.
ಅಂತರರಾಷ್ಟ್ರೀಯ ಹೂವು ಹರಾಜು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಂ. ವಿಶ್ವನಾಥ್ ಅವರು ಮಾತನಾಡಿ, ನವೆಂಬರ್ 12 ರಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಅವರು ಕರೆದಿದ್ದ ಸಭೆಯಲ್ಲಿ ವಿವಿಧ ಪಾಲುದಾರರು ಯಲಹಂಕ ತಹಶೀಲ್ದಾರ್ ಅವರನ್ನು ಮುಖ್ಯ ರಸ್ತೆಗೆ ಹತ್ತಿರವಿರುವ ಭೂಮಿಯನ್ನು ಹುಡುಕುವಂತೆ ಮನವಿ ಮಾಡಿದ್ದಾರೆಂದು ಹೇಳಿದ್ದಾರೆ.
ಈ ಯೋಜನೆಯಿಂದ ಕ್ಯಾಂಪಸ್ ನಲ್ಲಿನ ಸುಮಾರು 900 ಮರಗಳು ನಾಶವಾಗಲಿದೆ. ಅಲ್ಲದೆ, ಯಲಹಂಕದ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಮತ್ತು ವಿದ್ಯಾರಣ್ಯ ಪುರದಲ್ಲಿ ಸಂಚಾರಕ್ಕೆ ಸಮಸ್ಯೆಯಾಗಲಿದೆ ಮತ್ತು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಒತ್ತಡವನ್ನು ಹೆಚ್ಚಿಸುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಅವರ ಮಾಹಿತಿಯ ಆಧಾರದ ಮೇಲೆ ಪರ್ಯಾಯ ಭೂಮಿಯನ್ನು ಹುಡುಕಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಸೋಮವಾರ, ಕಾರ್ಯಕರ್ತರು ಜಿಕೆವಿಕೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ. ಸೀತಾರಾಮ್ ಜಿಕೆ ಅವರಿಗೆ ಮನವಿ ಪತ್ರ ನೀಡಿ, ಕ್ಯಾಂಪಸ್‌ನಲ್ಲಿನ ಹೂವಿನ ಮಾರುಕಟ್ಟೆ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಸರ್ಕಾರವು 24/9/2024 ರಂದು ಹೊರಡಿಸಿದ ಆದೇಶದಲ್ಲಿ, GKVK ಆವರಣದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಸೇರಿದ ಐದು ಎಕರೆ ಉಪ-ಭೂಮಿಯಲ್ಲಿ ಅಂತರರಾಷ್ಟ್ರೀಯ ಹೂವಿನ ಮಾರುಕಟ್ಟೆ ಸ್ಥಾಪಿಸಲು ತೋಟಗಾರಿಕೆ ಇಲಾಖೆಗೆ ಹಸ್ತಾಂತರಿಸಲು ಕೇಳಿತ್ತು.
ಹೂವುಗಳ ಮಾರಾಟಗಾರರು ಮತ್ತು ನಗರ ಮಾರುಕಟ್ಟೆಗೆ ಬರುವ ರೈತರು ಮಾರಾಟಕ್ಕೆ ಸೀಮಿತ ಸಮಯವನ್ನು ಹೊಂದಿರುವುದರಿಂದ ಮತ್ತು ಸಂಚಾರವು ಒಂದು ಪ್ರಮುಖ ಸಮಸ್ಯೆಯಾಗಿದ್ದರಿಂದ ಮಾರುಕಟ್ಟೆ ನಿರ್ಮಾಣ ಅಗತ್ಯ ಎದುರಾಗಿದೆ. ಅಲ್ಲದೆ, ಹೂವುಗಳನ್ನು ಉಳಿಸಲು ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು ಕೋಲ್ಡ್ ಸ್ಟೋರೇಜ್ ಇಲ್ಲದಿರುವುದು ಕೂಡ ತೋಟಗಾರಿಕೆ ಇಲಾಖೆಗೆ ಈ ರೀತಿಯ ಆಲೋಚನೆ ಬರುವಂತೆ ಮಾಡಿತ್ತು.
ಹೂವಿನ ಮಾರುಕಟ್ಟೆಯಲ್ಲಿ 900 ಮರಗಳನ್ನು ಕತ್ತರಿಸಲಾಗುವುದು ಎಂದು ಜಿಕೆವಿಕೆ ರಿಜಿಸ್ಟ್ರಾರ್ ತೋಟಗಾರಿಕೆ ಇಲಾಖೆಗೆ ತಿಳಿಸಿದ್ದರು ಎಂದು ಜಿಕೆವಿಕೆಯ ಹಿರಿಯ ಪ್ರಾಧ್ಯಾಪಕರು ಹೇಳಿದ್ದಾರೆ.
ವಿಶ್ವ ದರ್ಜೆಯ ಸೌಲಭ್ಯ ನಿರ್ಮಾಣ ಮಾಡಬೇಕಾದರೆ, ಅದಕ್ಕೆ ಐದು ಎಕರೆ ಭೂಮಿ ಸಾಕಾಗುವುದಿಲ್ಲ. ಇನ್ನೂ ಐದು ಎಕರೆ ಭೂಮಿಯ ಅಗತ್ಯವಿದೆ ಎಂದು ತೋಟಗಾರಿಕೆ ಇಲಾಖೆ ಸ್ಪಷ್ಟಪಡಿಸಿದೆ.
ಈ ನಡುವೆ ಕ್ಯಾಂಪಸ್ ಆವರಣದಲ್ಲಿ ವಾಣಿಜ್ಯ ಚಟುವಟಿಕೆಯು ಶೈಕ್ಷಣಿಕರ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಳವಳಗಳು ವ್ಯಕ್ತವಾಗುತ್ತಿವೆ.
Advertisement