
ಬೆಂಗಳೂರು: ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮನೆಯೊಂದರಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಂಪತಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಸುದರ್ಶನ್ (32) ಮತ್ತು ಕಾವ್ಯಾ (28) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಮಂಗಳವಾರ ತಡರಾತ್ರಿ ಅವರು ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿರುವ ಅವರ ಮನೆಯಲ್ಲಿ ಸೋಮವಾರ ರಾತ್ರಿ ಸ್ಫೋಟ ಸಂಭವಿಸಿತ್ತು.
ಆರಂಭದಲ್ಲಿ, ಇದು ಸಿಲಿಂಡರ್ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿತ್ತು. ಆದರೆ, ಸ್ಫೋಟಕ್ಕೆ ನಿಖರವಾದ ಕಾರಣವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 29 ರಂದು, ಮೋಹನ್ ಕುಮಾರ್ ಎಂಬುವವರು ತಮ್ಮ ಮನೆಯಲ್ಲಿ ಸ್ಫೋಟ ಸಂಭವಿಸಿದ ಕುರಿತು ದೂರು ನೀಡಿದ ಆಧಾರದ ಮೇಲೆ ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ದೂರುದಾರರ ಪ್ರಕಾರ, ಸೋಮವಾರ ರಾತ್ರಿ 8.30ರ ಸುಮಾರಿಗೆ, ತಾವು, ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳು ಮನೆಯಲ್ಲಿದ್ದಾಗ, ಶೌಚಾಲಯ ಪ್ರದೇಶದ ಬಳಿ ಸ್ಫೋಟದ ಶಬ್ದ ಕೇಳಿಸಿತು.
ಸ್ಫೋಟದಲ್ಲಿ ಅವರ ಮಗ ಮತ್ತು ಸೊಸೆಗೆ ತೀವ್ರ ಗಾಯಗಳಾಗಿವೆ. ಮನೆಯ ಲಾಬಿಯಲ್ಲಿದ್ದ ಮೋಹನ್ ಕುಮಾರ್ ಮತ್ತು ಅವರ ಮೊಮ್ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
'ನಾವು ನಡೆಸಿದ ತನಿಖೆ ಪ್ರಕಾರ, ಕಾವ್ಯಾ ಮತ್ತು ಸುದರ್ಶನ್ ಮನೆಯ ಪ್ಯಾಸೇಜ್ ಪ್ರದೇಶದಲ್ಲಿ ಏನೋ ಕೆಲಸ ಮಾಡುತ್ತಿದ್ದಾಗ ಸ್ಫೋಟ ಸಂಭವಿಸಿದೆ. ದೂರುದಾರರ ಹೇಳಿಕೆ ಪ್ರಕಾರ, ಅದು ಸಿಲಿಂಡರ್ ಸ್ಫೋಟ ಅಥವಾ ಇನ್ನಾವುದೇ ವಸ್ತುವಾಗಿರಬಹುದು ಎಂದು ಶಂಕಿಸಿದ್ದಾರೆ. ಈ ಕುರಿತು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದರು.
Advertisement