
ಬೆಂಗಳೂರು: ಕನಕಪುರ ಮುಖ್ಯ ರಸ್ತೆಯ ಯೆಲಚೇನಹಳ್ಳಿಯಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣದ ನೆಲಮಾಳಿಗೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಕನಿಷ್ಠ 19 ವಿದ್ಯುತ್ ಚಾಲಿತ ವಾಹನಗಳು ಸುಟ್ಟು ಭಸ್ಮವಾಗಿವೆ.
ಕನಕಪುರ ರಸ್ತೆಯ ಮಣಿಪಾಲ್ ಆಸ್ಪತ್ರೆ ಹತ್ತಿರದ ಡೊಮಿನಾಸ್ ಮಳಿಗೆಯ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ.
ಕೆಳಹಂತದ ವಾಹನ ನಿಲುಗಡೆ ಪ್ರದೇಶದಲ್ಲಿ ವಿದ್ಯುತ್ ಚಾಲಿತ ಸ್ಕೂಟರ್‌ಗಳು ಚಾರ್ಜಿಂಗ್ ಹಾಕಿದ್ದಾಗ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್‌ನಿಂದ ಕಿಡಿ ಹೊತ್ತಿ ಕೊಂಡಿದೆ.
ಪರಿಣಾಮ ವಾಹನ ನಿಲುಗಡೆ ಪ್ರದೇಶದಲ್ಲೇ ಇಟ್ಟಿದ್ದ ಗ್ಯಾಸ್ ಸಿಲಿಂಡರ್‌ಗೆ ಕಿಡಿ ತಾಕಿದ್ದರಿಂದ ಸಿಡಿದು ಬೆಂಕಿ ಜ್ವಾಲೆ ಧಗಧಗಿಸಿದೆ. ತಕ್ಷಣವೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಿಬ್ಬಂದಿ ತಿಳಿಸಿದ್ದಾರೆ.
ಬೆಳಿಗ್ಗೆ 7.45 ಕ್ಕೆ ಪ್ರತಾಪ್ ಎಂಬ ವ್ಯಕ್ತಿಯಿಂದ ಮಾಹಿತಿ ಪಡೆದ ಅಗ್ನಿಶಾಮಕ ನಿಯಂತ್ರಣ ಕೊಠಡಿ ಸಿಬ್ಬಂದಿ ಬನಶಂಕರಿ ಮತ್ತು ಅಂಜನಾಪುರ ಅಗ್ನಿಶಾಮಕ ಠಾಣೆಗಳಿಂದ ತಲಾ ಒಂದು ಅಗ್ನಿಶಾಮಕ ವಾಹನವನ್ನು ಸ್ಥಳಕ್ಕೆ ರವಾನಿಸಿದರು. ನಂತರ ಕೆಲವೇ ನಿಮಿಷಗಳಲ್ಲಿ ಬೆಂಕಿ ನಂದಿಸಲಾಗಿತ್ತಾದರೂ, ಅಷ್ಟರಲ್ಲಾಗಲೇ 19 ಸ್ಕೂಟರ್ ಗಳು ಭಾಗಶಃ ಸುಟ್ಟು ಕರಕಲಾಗಿದ್ದವು.
ನೆಲಮಾಳಿಗೆಯಲ್ಲಿ ಅಳವಡಿಸಲಾದ ಇವಿ ದ್ವಿಚಕ್ರ ವಾಹನಗಳ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಶಂಕಿಸಲಾಗಿದೆ. ಒಂದು ವಾಹನವು ಹೆಚ್ಚು ಬಿಸಿಯಾಗಿದ್ದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿರಬೇಕು. ಬೆಂಕಿಯು ನೆಲಮಾಳಿಗೆಯಲ್ಲಿರುವ ಗ್ಯಾಸ್ ಲೈನ್‌ಗೆ ಹರಡಿದ್ದು, ಇದರಿಂದಾಗಿ ಆರು ಸಿಲಿಂಡರ್‌ಗಳಲ್ಲಿ ಒಂದು ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಘಟನೆ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಇದರಿಂದ ಯಾರಿಗೂ ಗಾಯಗಳಾಗಿಲ್ಲ. ನೆಲಮಾಳಿಗೆಯಲ್ಲಿನ ಹಾನಿಯನ್ನು ಹೊರತುಪಡಿಸಿ, ಇತರ ಮೂರು ಮಹಡಿಗಳಲ್ಲಿ ಯಾವುದೂ ಪರಿಣಾಮ ಬೀರಿಲ್ಲ. ರೆಸ್ಟೋರೆಂಟ್‌ನ ಮಹಡಿ ವ್ಯವಸ್ಥಾಪಕ ನಟರಾಜ್ ನಮ್ಮೊಂದಿಗೆ ಮಾತನಾಡಿದ್ದಾರೆ. ನಷ್ಟದ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement