
ಬೆಂಗಳೂರು: ಬೆಂಗಳೂರಿನ ರಸ್ತೆ ಗುಂಡಿ ಮತ್ತು ಮೂಲಸೌಕರ್ಯ ಕುರಿತು ಚರ್ಚೆಗಳು ನಡೆಯುತ್ತಿರುವ ನಡುವಲ್ಲೇ ನಗರದ ಐಟಿ ಕಂಪನಿಗಳಿಗೆ ಆಂಧ್ರಪ್ರದೇಶ ಸರ್ಕಾರ ಮತ್ತೆ ಆಹ್ವಾನ ನೀಡಿದ್ದು, ಇದಕ್ಕೆ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ರಸ್ತೆ ಗುಂಡಿಗಳ ಕಾರಣದಿಂದಾಗಿ ಹೊರ ವರ್ತುಲ ರಸ್ತೆಯಿಂದ ಸ್ಟಾರ್ಟ್ಅಪ್‌ಗಳು ಹಾಗೂ ಉದ್ಯಮ ಸಂಸ್ಥೆಗಳು ಉತ್ತರ ಬೆಂಗಳೂರು, ವೈಟ್‌ಫೀಲ್ಡ್ ಕಡೆಗೆ ಮುಖಮಾಡುತ್ತಿವೆ ಎಂದು ಕ್ರಿಸ್ಟಿನ್ ಮ್ಯಾಥ್ಯೂ ಫಿಲಿಪ್ ಎಂಬ ಅಕೌಂಟ್‌ನಲ್ಲಿ ಟ್ವೀಟ್ ಮಾಡಲಾಗಿತ್ತು.
ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಅವರು, ಹೌದು ಉತ್ತರದ ಕಡೆಗೆ ಸ್ವಲ್ಪ ಚೆನ್ನಾಗಿದೆ. ಇನ್ನೂ ಸ್ವಲ್ಪ ಉತ್ತರಕ್ಕೆ ಬಂದರೆ ಅನಂತಪುರದಲ್ಲಿ ಚೆನ್ನಾಗಿದೆ ಎಂದಿದ್ದರು. ಅಲ್ಲದೆ, ನಾವು ವಿಶ್ವದರ್ಜೆಯ ಏರೋಸ್ಪೇಸ್ ಮತ್ತು ಡಿಫೆನ್ಸ್ ಎಕೋಸಿಸ್ಟಂ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ಆಂಧ್ರ ಪ್ರದೇಶದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಉಲ್ಲೇಖ ಮಾಡಿ ಉದ್ಯಮಿಗಳಿಗೆ ಆಹ್ವಾನ ನೀಡಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆಯವರು, ದುರ್ಬಲ ವ್ಯವಸ್ಥೆ ಇರುವವರು ಅದನ್ನು ಸುಧಾರಿಸಲು ಪ್ರಯತ್ನಿಸುವುದು ಸಾಮಾನ್ಯ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಆ ಪ್ರಯತ್ನ ತೀವ್ರ ಹತಾಶೆಯ ಹಂತಕ್ಕೆ ಹೋದಾಗ ಅದು ಮತ್ತಷ್ಟು ದುರ್ಬಲವೇ ಆಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಇದಲ್ಲದೆ, ಬೆಂಗಳೂರಿನ ಸಾಧನೆಗಳ ಬಗ್ಗೆಯೂ ಪಟ್ಟಿ ಮಾಡಿರುವ ಅವರು, ಬೆಂಗಳೂರಿನಲ್ಲಿ 2035 ರವರೆಗೆ ಶೇ 8.5 ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. 2025 ರಲ್ಲಿ ಆಸ್ತಿ ಬೆಲೆಯಲ್ಲಿ ಶೇಕಡಾ 5 ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.
ನಗರೀಕರಣ, ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯ ವೇಗಕ್ಕಾಗಿ ಜಾಗತಿಕ ಸೂಚ್ಯಂಕಗಳಲ್ಲಿ ಉನ್ನತ ಶ್ರೇಯಾಂಕಗಳನ್ನು ಬೆಂಗಳೂರು ಪಡೆದಿದೆ. 2025ರ ವೇಳೆಗೆ ಅಂದಾಜು 14.4 ದಶಲಕ್ಷ ಜನಸಂಖ್ಯೆ ಇದ್ದು, ವಾರ್ಷಿಕ ಶೇ 2.76 ರ ದರದಲ್ಲಿ ಬೆಳೆಯುತ್ತಿದೆ. ಇದು ಭಾರತದ ಪ್ರಮುಖ ವಲಸೆ ಕೇಂದ್ರಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಇನ್ನೊಂದು ಜೀವಿಯಿಂದ ಪೋಷಕಾಂಶಗಳನ್ನು ಹೀರಿಕೊಂಡು ಬದುಕುವ ಜೀವಿಯನ್ನು ಏನೆಂದು ಕರೆಯುತ್ತಾರೆ ಎಂದು ಪ್ರಶ್ನಿಸುವ ಮೂಲಕ ನಾರಾ ಲೋಕೇಶ್ಗೆ ಟಾಂಗ್ ಕೊಟ್ಟಿದ್ದಾರೆ.
ಪ್ರಿಯಾಂಕ್ ಖರ್ಗೆಯವರ ಟ್ವೀಟ್'ಗೆ ಪ್ರತಿ ಟ್ವೀಟ್ ಮಾಡಿರುವ ನಾರಾ ಲೋಕೇಶ್ ಅವರು, ಭಾರತದ ಅತ್ಯಂತ ಕಿರಿಯ ರಾಜ್ಯವಾಗಿ, ನಾವು ಬೆಳೆಯಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಪ್ರತಿಯೊಂದು ಅವಕಾಶವನ್ನು ಹುಡುಕುತ್ತಿದ್ದೇವೆ. ರಾಜ್ಯಗಳು ಹೂಡಿಕೆ ಮತ್ತು ಉದ್ಯೋಗಗಳಿಗಾಗಿ ಸ್ಪರ್ಧಿಸಿದಾಗ, ಭಾರತವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ನಂಬುತ್ತೇನೆ. ನನ್ನ ಸಲಹೆ ಎಂದರೆ, ರಸ್ತೆಗಳಲ್ಲಿರುವ ಗುಂಡಿಗಳಂತೆ ದುರಹಂಕಾರದ ಪ್ರಯಾಣವು ಮುಗ್ಗರಿಸುವ ಮೊದಲು ಸರಿಪಡಿಸಬೇಕು ಎಂದು ಹೇಳಿದ್ದಾರೆ.
Advertisement