
ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಲ್ದಾಣದಲ್ಲಿ ಮತ್ತೊಂದು ಅವಘಡ ಸಂಭವಿಸಿದ್ದು, ವ್ಯಕ್ತಿಯೋರ್ವ ಮೆಟ್ರೋ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶನಿವಾರ ವರದಿಯಾಗಿದೆ.
ಬೆಂಗಳೂರು ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ಮೆಟ್ರೋ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯನ್ನು ಮೆಟ್ರೋ ಅಧಿಕಾರಿಗಳು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು 35 ವರ್ಷದ ವೀರೇಶ್ ಎಂದು ಗುರುತಿಸಲಾಗಿದ್ದು, ವಿರೇಶ್ ವಿಧಾನಸೌಧದಲ್ಲಿ ಡಿ ಗ್ರೂಪ್ ನೌಕರನಾಗಿದ್ದ ಎನ್ನಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದ ಹಸಿರು ಮಾರ್ಗದ ಬಳಿ ಬಂದ ವೀರೇಶ್ ಮಧ್ಯಾಹ್ನ 3.19ರ ಸುಮಾರಿಗೆ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಮಾದವಾರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದ (Green Line) ನಡುವೆ ರೈಲು ಸಂಚರಿಸುತ್ತಿತ್ತು.
ಪ್ಲಾಟ್ಫಾರಂ 3ರಲ್ಲಿ ನಮ್ಮ ಮೆಟ್ರೋ ರೈಲಿನಡಿ ಸಿಲುಕಿದ್ದ ವೀರೇಶ್ ನನ್ನು ಮೆಟ್ರೋ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿದ್ದ ವೀರೇಶ್ನನ್ನು ಆ್ಯಂಬುಲೆನ್ಸ್ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.
ಸದ್ಯ ವೀರೇಶ್ಗೆ ತಲೆಗೆ ತೀವ್ರವಾದ ಗಾಯ ಹಿನ್ನಲೆ ಎಮರ್ಜೆನ್ಸಿ ವಾರ್ಡ್ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಇನ್ನು ಘಟನೆ ತಿಳಿಯುತ್ತಿದ್ದಂತೆ ವೀರೇಶ್ ಕುಟುಂಬಸ್ಥರು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. ವೀರೇಶ್ ರಕ್ಷಣೆ ಬೆನ್ನಲ್ಲೆ ಅತ್ತ ಹಸಿರು ಮಾರ್ಗದಲ್ಲಿ ಸಂಚಾರ ಪುನಾರಂಭಗೊಳಿಸಲಾಗಿದೆ.
BMRCL ಮಾಧ್ಯಮ ಪ್ರಕಟಣೆ
ಇದೇ ವಿಚಾರವಾಗಿ ಬಿಎಂಆರ್ ಸಿಎಲ್ ಕೂಡ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, 'ಇಂದು ಮಧ್ಯಾಹ್ನ 3.17ಕ್ಕೆ ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ ಮೆಜೆಸ್ಟಿಕ್ ಟು ಮಾದವಾರ ಕಡೆಗೆ ಹೋಗುವ ಹಸಿರು ಮಾರ್ಗದಲ್ಲಿ 35 ವರ್ಷದ ಪ್ರಯಾಣಿಕನು ರೈಲಿನ ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮವಾಗಿ ಈ ಭಾಗದ ರೈಲು ಸೇವೆಯಲ್ಲಿ ವ್ಯತ್ಯಯವಾಯಿತು.
ಸದರಿ ಪ್ರಯಾಣಿಕನನ್ನು ರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಯಿತು. ಈ ಸಮಯದಲ್ಲಿ ರೇಷ್ಮೆ ಸಂಸ್ಥೆ, ನ್ಯಾಷನಲ್ ಕಾಲೇಜು, ರಾಜಾಜಿನಗರ ಮತ್ತು ಮಾದಾವರ ನಡುವೆ ಶಾರ್ಟ್ ಲೂಪ್ ಸೇವೆಯನ್ನು ನಡೆಸಲಾಯಿತು. ನಂತರ ಸುಮಾರು 3 ಗಂಟೆ 47 ನಿಮಿಷಕ್ಕೆ ಸೇವೆಯನ್ನು ಪುನಃ ಆರಂಭಿಸಲಾಯಿತು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
Advertisement