
ಹಾಸನ: ಇತ್ತೀಚೆಗೆ ಬೇಲೂರು ಪಟ್ಟಣದಲ್ಲಿ ಬೀದಿ ನಾಯಿಗಳ ದಾಳಿಗೊಳಗಾಗಿ ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (HIMS) ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಚಿಕ್ಕಮ್ಮ ಅವರನ್ನು ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಭಾನುವಾರ ಭೇಟಿ ಮಾಡಿದರು.
ಬೇಲೂರಿನಲ್ಲಿ ಮನೆ ಮನೆಗೆ ಭೇಟಿ ನೀಡಿ, ಜಾತಿ ಸಮೀಕ್ಷೆ ನಡೆಸುತ್ತಿದ್ದ ಚಿಕ್ಕಮ್ಮ ಅವರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದವು. ಜೊತೆಗೆ ರಕ್ಷಣೆಗೆ ಬಂದಿದ್ದ ಇತರರನ್ನು ಕಚ್ಚಿದ್ದವು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ.
ಭೇಟಿ ವೇಳೆ ಗಾಯಾಳುಗಳ ಆರೋಗ್ಯ ಕುರಿತು ಮಾಹಿತಿ ಪಡೆದ ಅವರು, ಗಾಯಗೊಂಡ ಶಿಕ್ಷಕರಿಗೆ ಸರಿಯಾದ ಚಿಕಿತ್ಸೆ ಮತ್ತು ಸಕಾಲಿಕ ಊಟವನ್ನು ಖಚಿತಪಡಿಸಿಕೊಳ್ಳುವಂತೆ ಹಿಮ್ಸ್ ನಿರ್ದೇಶಕ ಡಾ. ರಾಜಣ್ಣ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗಪ್ಪ ಅವರಿಗೆ ಸೂಚಿಸಿದರು.
ಇದೇ ವೇಳೆ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ವಿಫಲವಾದ ಬೇಲೂರು ಪಟ್ಟಣ ಪುರಸಭೆಯ ಮುಖ್ಯ ಅಧಿಕಾರಿ ಬಸವರಾಜ ಶಿಗ್ಗಾವಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಪರಿಸ್ಥಿತಿ ನಿರ್ವಹಿಸಲು ಮತ್ತು ಬೀದಿ ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಬೇಲೂರು ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಏಳು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ ಎಂದು ವರದಿಯಾಗಿದೆ.
Advertisement