
ಬೆಂಗಳೂರು: ಹೆಣ್ಣು ಮಗು ಜನನ ಹಿನ್ನೆಲೆ ಪತಿ ನೀಡಿದ ಕಿರುಕುಳ ತಾಳಲಾರದೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಲಗ್ಗೆರೆಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಲಗ್ಗೆರೆ ಬಳಿಯ ಮುನೇಶ್ವರ ಬ್ಲಾಕ್ ನಿವಾಸಿ ರಕ್ಷಿತಾ (26) ಎಂದು ಗುರುತಿಸಲಾಗಿದೆ. ಖಾಸಗಿ ಬ್ಯಾಂಕ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ರವೀಶ್ ಮತ್ತು ಅವರ ಸಹೋದರ ಲೋಕೇಶ್ ವಿರುದ್ಧ ರಕ್ಷಿತಾ ತಂದೆ ದೂರು ದಾಖಲಿಸಿದ್ದು, ಮಗಳಿಗೆ ಕಿರುಕುಳ ನೀಡಿ ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತುಮಕೂರು ಮೂಲದ ರವೀಶ್ ಮತ್ತು ಹಾಸನ ಜಿಲ್ಲೆಯ ಅರಸೀಕೆರೆಯ ರಕ್ಷಿತಾ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗಳಿಗೆ ಮೂರು ವರ್ಷದ ಮಗಳಿದ್ದಾಳೆ.
ಆರೋಪಿ ತನ್ನ ಅತ್ತೆ-ಮಾವಂದಿರಿಂದ ದೂರವಿದ್ದು, ಪತ್ನಿ ಕೂಡ ದೂರ ಇರುವಂತೆ ಮಾಡಿದ್ದ. ಯಾವುದೇ ಕಾರ್ಯಕ್ರಮಗಳಿಗೂ ಹೋಗದಂತೆ ಮಾಡಿದ್ದ. ‘ಹೆಣ್ಣು ಮಗು ಬೇಡ. ಗಂಡು ಮಗು ಬೇಕೆಂದು ರವೀಶ್ ಪ್ರತಿನಿತ್ಯ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ.
ಹೆಣ್ಣು ಮಗುವನ್ನು ರವೀಶ್ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ. ಮಗುವಿನ ಕಿವಿಯನ್ನೂ ಸುಟ್ಟಿದ್ದರು. ಮಗು ಜನಿಸಿದಾಗ ಆಸ್ಪತ್ರೆ ಬಿಲ್ ಅನ್ನೂ ಪಾವತಿ ಮಾಡಿರಲಿಲ್ಲ. ಈ ಹಿಂದೆಯೂ ಗಲಾಟೆ ನಡೆದಿತ್ತು.
ಮಗಳಿಂದ ಕೆಲ ದಿನಗಳಿಂದ ಫೋನ್ ಬಾರದ ಕಾರಣ ಮನೆಗೆ ಹೋಗಿದ್ದೆವು. ಬಾಗಿಲು ಹೊರಗಿನಿಂದ ಲಾಕ್ ಆಗಿತ್ತು. ಬಳಿಕ ಮಾಲೀಕರಿಂದ ಹೆಚ್ಚುವರಿ ಕೀ ಪಡೆದು, ಒಳಗೆ ಹೋಗಿ ನೋಡಿದಾಗ ಮಗಳು ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರು ಹಿನ್ನೆಲೆಯಲ್ಲಿ ನಂದಿನಿ ಲೇಔಟ್ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕೌಟುಂಬಿಕ ಕಿರುಕುಳದ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement