
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಟೋ ಚಾಲಕರೊಬ್ಬರ ವಿರುದ್ಧ ಈಶಾನ್ಯ ಭಾರತದ ಮಹಿಳೆ ಗಂಭೀರ ಆರೋಪ ಮಾಡಿದ್ದು, ಕನ್ನಡ ಮಾತನಾಡಲು ಬಾರದಿದ್ದಕ್ಕೇ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಹೌದು.. ಬೆಂಗಳೂರಿನ ಉಬರ್ ಆಟೋ ಚಾಲಕ ತನ್ನ ಆಟೋ ಹತ್ತಿದ ಈಶಾನ್ಯ ಭಾರತದ ಮಹಿಳೆಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಮಹಿಳೆ
ಆಟೋ ಚಾಲಕನೊಬ್ಬ ತನಗೆ ಅರ್ಥವಾಗದ ಕನ್ನಡದಲ್ಲಿ ಮಾತನಾಡುವಂತೆ ಹೇಳಿದ. ಅಲ್ಲದೆ ಆಕೆಯನ್ನು ಹೊಡೆಯಲು ಪ್ರಯತ್ನಿಸುತ್ತಿರುವುದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಬೆಂಗಳೂರು ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.
ಮಹಿಳೆಯ ಈ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಪೊಲೀಸರು ಹೆಚ್ಚಿನ ವಿವರಗಳನ್ನು ನೀಡುವಂತೆ ಮಹಿಳೆಗೆ ಕೇಳಿದ್ದಾರೆ. ಘಟನೆಯ ಸ್ಥಳ ಮತ್ತು ಅವರ ಸಂಪರ್ಕ ಸಂಖ್ಯೆಯನ್ನು ಕೋರಿದ್ದಾರೆ.
ಅಂತೆಯೇ ಉಬರ್ ಸಂಸ್ಥೆ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಕ್ಷಮೆಯಾಚಿಸಿದೆ. "ಈ ನಡವಳಿಕೆಯು ಅತ್ಯಂತ ಕಳವಳಕಾರಿಯಾಗಿದೆ ಮತ್ತು ಇದು ಸಂಭವಿಸಿದ್ದಕ್ಕೆ ನಮಗೆ ತುಂಬಾ ವಿಷಾದವಿದೆ" ಎಂದು ಅದು ಹೇಳಿದೆ.
ಇಷ್ಟಕ್ಕೂ ಆಗಿದ್ದೇನು?
ಇದೇ ಅಕ್ಟೋಬರ್ 2 ರಂದು ಈಶಾನ್ಯ ಭಾರತದ ಎನ್ ಬೀ ಎಂಬ ಮಹಿಳೆ ಉಬರ್ ಆಟೋ ಬುಕ್ ಮಾಡಿದ್ದು, ಈ ವೇಳೆ ರೈಡ್ ಸ್ವೀಕರಿಸಿದ ಆಟೋ ಚಾಲಕ ತಡವಾಗಿದ್ದಾನೆ. ಈ ವೇಳೆ ಮಹಿಳೆ ಎನ್ ಬೀ ರೈಡ್ ಕ್ಯಾನ್ಸಲ್ ಮಾಡಿದ್ದಾಳೆ. ಬಳಿಕ ಮತ್ತೊಂದು ರೈಡ್ ಆಟೋ ಬುಕ್ ಮಾಡಿಕೊಂಡು ಹೊರಟಿದ್ದಾಳೆ.
ಈ ವೇಳೆ ಆಕೆಯನ್ನು ತಡೆದ ಈ ಹಿಂದಿನ ರೈಡ್ ನ ಆಟೋ ಚಾಲಕ ಆಕೆಯೊಂದಿಗೆ ಜಗಳಕ್ಕಿಳಿದಿದ್ದಾನೆ. ರೈಡ್ ಯಾಕೆ ಕ್ಯಾನ್ಸಲ್ ಮಾಡಿದ್ದೀರಿ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ನೋಡ ನೋಡುತ್ತಲೇ ಹಲ್ಲೆಗೂ ಮುಂದಾಗಿದ್ದಾನೆ. ಇಷ್ಟು ಘಟನೆಯನ್ನು ಮಹಿಳೆ ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾಳೆ.
ವಾಕ್ಸಮರದ ವೇಳೆ ಆತ ಎನ್ ಬೀಯೊಂದಿಗೆ ಕನ್ನಡ ಮಾತಾಡು ಎಂದು ಗದರಿಸಿದ್ದಾನೆ, ಈ ವೇಳೆ ಆಕೆ ತನಗೆ ಕನ್ನಡ ಬರುವುದಿಲ್ಲ ಎಂದಾಗ ಆತ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಾನು ಈಶಾನ್ಯದಿಂದ ಬಂದವಳು ಎಂಬ ಕಾರಣಕ್ಕೆ ಅವನು ನನ್ನನ್ನು ಈ ರೀತಿ ನಿಂದಿಸುತ್ತಿದ್ದಾನೆ ಎಂದು ಅವಳು ವೀಡಿಯೊದಲ್ಲಿ ಹೇಳುತ್ತಿರುವುದು ಕೇಳಿಬಂದಿದೆ.
Advertisement