ನಗರದಲ್ಲಿ ಡಿಜಿಟಲ್ ಅರೆಸ್ಚ್ ಕಂಪನಿ ಪತ್ತೆ: ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ-ಕೆನಡಾ ಪ್ರಜೆಗಳ ಸುಲಿಗೆ; 16 ಮಂದಿ ಆರೋಪಿಗಳ ಬಂಧನ

16 ಆರೋಪಿಗಳಲ್ಲಿ ಎಂಟು ಮಂದಿ ಮಹಾರಾಷ್ಟ್ರದವರು, ನಾಲ್ವರು ಮೇಘಾಲಯದವರು ಮತ್ತು ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಒಬ್ಬರಿದ್ದಾರೆ.
Cyber Crime
ಸೈಬರ್ ಅಪರಾಧ (ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಬೆಂಗಳೂರಿನಲ್ಲಿ ಕುಳಿತು ಡಿಜಿಟಲ್ ಅರೆಸ್ಚ್ ಮೂಲಕ ಅಮೆರಿಕಾ ಹಾಗೂ ಕೆನಡಾ ಜನರನ್ನು ವಂಚಿಸುತ್ತಿದ್ದ ಜಾಲವೊಂದನ್ನು ನಗರ ಪೊಲೀಸರು ಬೇಧಿಸಿದ್ದು, ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ನಕಲಿ ಬಿಪಿಒ ಸಂಸ್ಥೆಯ ಇಬ್ಬರು ಮಹಿಳೆಯರು ಸೇರಿದಂತೆ 16 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಎ ಫ್ರಾನ್ಸಿಸ್ (29), ಆರ್ ಕಾರ್ತಿಕ್ ರಾಜ್ ವಾದ್ಯನಂ (25), ಆರ್ ಸುನಿಲ್ (30), ಎ ಅರವಿಂದ್ ಅಣ್ಣಿ ಪೂಜಾರಿ (31), ಎಲ್ ಇಂದರ್ ಲಾಲ್ಮಣಿ ಯಾದವ್ (31), ಪಿ ರೋಹನ್ (28), ಆರ್ ರಿಶಿತ್ ರಮೇಶ್ ಸಾಲಿಯನ್ (23), ಮಹಾರಾಷ್ಟ್ರದ ಪಿ ಗುರು ಪ್ರಸನ್ನ (32), ಎಫ್ ಮಿನೋಟ್ ಕಂಕೈ (32), ಆರ್ ರೆಮಿಸನ್ ಬಾಮನ್ (30), ಕೆ ಫಾನಿ ಲೇಭಾ ನಂಗ್ಜಿ (27), ಮೇಘಾಲಯದ ಎಫ್ ಎಲ್ಜಿಬಾ ಮೇರಿ ಮಾರ್ಬನಿಂಗ್ (23), ಒಡಿಶಾದ ಬಿ ರಾಕೇಶ್ ಕುಮಾರ್ ಸಿಂಗ್ (29), ಮಧ್ಯಪ್ರದೇಶದ ಎಸ್ ರಾಮಕೃಷ್ಣ ಸೋನಿ (43), ಪಶ್ಚಿಮ ಬಂಗಾಳದ ಪಿ ಪ್ರಿಯಾಂಕಾ ಗುರುಂಗ್ (24) ಮತ್ತು ಗುಜರಾತ್‌ನ ಜಿ ಮಾಧೇವ್ ಸಿಂಗ್ (28) ಎಂದು ಗುರ್ತಿಸಲಾಗಿದೆ.

16 ಆರೋಪಿಗಳಲ್ಲಿ ಎಂಟು ಮಂದಿ ಮಹಾರಾಷ್ಟ್ರದವರು, ನಾಲ್ವರು ಮೇಘಾಲಯದವರು ಮತ್ತು ಒಡಿಶಾ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನ ತಲಾ ಒಬ್ಬರಿದ್ದಾರೆ.

ಆರೋಪಿಗಳು ಇಂಟರ್ನೆಟ್ ಕರೆಗಳ ಮೂಲಕ ಜನರನ್ನು ವಂಚಿಸುತ್ತಿದ್ದರು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

Cyber Crime
ಡಿಜಿಟಲ್ ಅರೆಸ್ಟ್: ದೆಹಲಿಯಲ್ಲಿ ನಿವೃತ್ತ ಬ್ಯಾಂಕರ್ ಗೆ 23 ಕೋಟಿ ರೂ ವಂಚನೆ

ಇತ್ತೀಚೆಗೆ ಎಚ್‌ಎಸ್‌ಆರ್ ಲೇಔಟ್ 4ನೇ ಹಂತದಲ್ಲಿ ಸೈಬಿಟ್ಸ್ ಸಲೂಷನ್ ಕಂಪನಿ ಹೆಸರಿನಲ್ಲಿ ಮೇಲೆ ಎಚ್‌ಎಸ್‌ಆರ್‌ಲೇಔಟ್ ಪೊಲೀಸರು ದಾಳಿ ನಡೆಸಿದಾಗ ಸೈಬರ್‌ವಂಚನೆ ಜಾಲ ಬಯಲಾಗಿದೆ ಎಂದು ತಿಳಿಸಿದ್ದಾರೆ.

ಬಂಧಿತರಿಂದ 41 ಕಂಪ್ಯೂಟರ್‌ಗಳು, ಎರಡು ಹಾಜರಾತಿ ರಿಜಿಸ್ಟರ್‌ಗಳು, ನಾಲ್ಕು ಸ್ಕ್ರಿಪ್ಟ್ ನೋಟ್‌ಬುಕ್‌ಗಳು, 25 ಮೊಬೈಲ್ ಫೋನ್‌ಗಳು ಮತ್ತು ಐಡಿ ಕಾರ್ಡ್‌ಗಳು, ಒಂದು ಐಪಿ ಸಾಧನ, ನಾಲ್ಕು ರೂಟರ್‌ಗಳು ಮತ್ತು ನಾಲ್ಕು ಮೋಡೆಮ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

"ಆರೋಪಿಗಳು ಅಮೆರಿಕದ ನಾಗರಿಕರನ್ನು ಫೋನ್ ಮೂಲಕ ಸಂಪರ್ಕಿಸಿ, ತಾವು ಅಮೆರಿಕದ ಕಾನೂನು ಜಾರಿ ಸಂಸ್ಥೆಗಳಿಂದ ಬಂದವರು ಎಂದು ಹೇಳಿಕೊಂಡಿದ್ದಾರೆ. ನಾಗರೀಕರಿಗೆ ನೀವು ಮಾದಕವಸ್ತು ಕಳ್ಳಸಾಗಣೆ ಅಥವಾ ಹಣ ವರ್ಗಾವಣೆ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರೆಂದು ಬೆದರಿಸುತ್ತಿದ್ದರು. ಅವರಿಗೆ "ಸಹಾಯ" ಮಾಡುವ ನೆಪದಲ್ಲಿ, ವಿಷಯವನ್ನು "ಇತ್ಯರ್ಥಗೊಳಿಸಲು" ಹಣದ ಬೇಡಿಕೆ ಇಡುತ್ತಿದ್ದರು.

ಕಳೆದ ಎರಡು ವರ್ಷಗಳಿಂದ ಎಚ್‌ಎಸ್‌ಆರ್‌ಲೇಔಟ್‌ನಲ್ಲಿ ಕಾಲ್ ಸೆಂಟರ್‌ಕಂಪನಿ ಕಾರ್ಯಚಟುವಟಿಕೆ ನಡೆಸಲಾಗಿದ್ದು, ತಮ್ಮ ಕಂಪನಿಗೆ ಹೊರರಾಜ್ಯಗಳ 20 ರಿಂದ 25 ಯುವಕರನ್ನು ಆರೋಪಿಗಳು ನೇಮಿಸಿಕೊಂಡಿದ್ದರು. ಬಳಿಕ ವಿದೇಶಿ ಪ್ರಜೆಗಳಿಗೆ ಹೇಗೆ ಡಿಜಿಟಲ್ ಅರೆಸ್ಟ್ ಗೊಳಪಡಿಸಬೇಕು ಎನ್ನುವುದನ್ನು ಆನ್‌ಲೈನ್‌ ಮೂಲಕ ತರಬೇತಿ ನೀಡಿದ್ದರು.

Cyber Crime
ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 3 ದಿನ ಕಿರುಕುಳ, 6 ಲಕ್ಷ ರೂ ವಂಚನೆ; ಎದೆ ನೋವಿನಿಂದ ನಿವೃತ್ತ ಸರ್ಕಾರಿ ವೈದ್ಯೆ ಸಾವು!

ಇದಕ್ಕಾಗಿ ಸಂಭಾಷಣೆಗೆ ಸ್ಕ್ರಿಪ್ಟ್ ಸಹ ಕೊಟ್ಟಿದ್ದರು. ಅಲ್ಲದೆ, ಬಿಟಿಎಂ ಲೇಔಟ್ ಹಾಗೂ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರತ್ಯೇಕವಾಗಿ ಪಿಜಿಗಳಲ್ಲಿ ಆ ನೌಕರರಿಗೆ ಊಟ-ವಸತಿ ಕಲ್ಪಿಸಿದ್ದರು. ಸಂಜೆ ಕೆಲಸಕ್ಕೆ ಬಂದರೆ ಮುಂಜಾನೆವರೆಗೆ ವಿದೇಶಿಯರ ಜೊತೆ ಅವರು ಮಾತನಾಡಬೇಕಿತ್ತು. ಒಮ್ಮೆ ಕಚೇರಿಯೊಳಗೆ ಪ್ರವೇಶಿಸಿದ ಕೂಡಲೇ ಬಾಗಿಲು ಬಂದ್ ಮಾಡುತ್ತಿದ್ದರು. ಕಚೇರಿಯಲ್ಲಿ ಕೂಡಿ ಹಾಕಿ 'ಡಿಜಿಟಲ್ ಅರೆಸ್ಟ್ ಸಂತ್ರಸ್ತರಿಗೆ ಕರೆ ಮಾಡಿಸುತ್ತಿದ್ದರು.

ಈ ಸಿಬ್ಬಂದಿಗೆ ಪ್ರತಿ ತಿಂಗಳು 20 ರಿಂದ 25 ಸಾವಿರ ರು. ವೇತನ ಹಾಗೂ 2ರಿಂದ 4 ಲಕ್ಷ ರು.ವರೆಗೆ ಕಮಿಷನ್ ರೂಪದಲ್ಲಿ ಹಣ ಸಂದಾಯವಾಗುತ್ತಿತ್ತು. ಮೂರು ವಾರಗಳ ಕಾಲ ಟೆಲಿ ಕಾಲರ್‌ ತರಬೇತಿ ನೀಡಿದ ನಂತರ ಕಂಪನಿಯವರು ಸೂಚಿಸಿದಂತೆ ಅಮೆರಿಕ ಗಡಿ ಭದ್ರತಾ ಪಡೆ, ಅಮೆರಿಕ ಅಂಚೆ ಸೇವಾ ಇಲಾಖೆ, ಅಮೆರಿಕ ಕಸ್ಟಮ್ಸ್ ಹಾಗೂ ಬಾರ್ಡರ್ ಪ್ರೋಟೆಷನ್ ಫೋರ್ಸ್ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕ ಪ್ರಜೆಗಳಿಗೆ ಕರೆ ಮಾಡುತ್ತಿದ್ದರು.

ಅಮೆರಿಕ ಪ್ರಜೆಗಳಿಗೆ ಸಹ ಡ್ರಗ್ಸ್ ಕೇಸ್ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವುದಾಗಿ ಹೆದರಿಸಿ ನಕಲಿ ಬಂಧನ ವಾರೆಂಟ್ ಹಾಗೂ ನಕಲಿ ಪೊಲೀಸ್ ಐಡಿ ತೋರಿಸಿ ಡಿಜಿಟಲ್ ಅರೆಸ್ಟ್ ಮಾಡುತ್ತಿದ್ದರು. ನಂತರ ನಮ್ಮ ಮಾತನ್ನು ಕೇಳುವಂತೆ ಸಂತ್ರಸ್ತರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು. ಹೀಗೆ ವಂಚನೆ ಬಲೆಗೆ ಬಿದ್ದ ಸಂತ್ರಸ್ತರಿಂದ ಹಣವನ್ನು ಕಂಪನಿಯ ವ್ಯಾಲೇಟ್ ಅಥವಾ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಈ ಕೃತ್ಯಕ್ಕೆ ಲೈವ್ ಸರ್ವರ್ ಸಾಫ್ಟ್‌ವೇರ್‌ನಲ್ಲಿ ಆರೋಪಿಗಳು ವ್ಯವಹರಿಸಿದ್ದಾರೆ.

ಅಮೆರಿಕಾ ನಾಗರಿಕರ ಜತೆ ಮಾತನಾಡಲು ಜಸ್ಟ್‌ಪೇಸ್ಟ್ ಇಟಿ ಸೈಟ್ ಬಳಸಿ ಸ್ಕ್ರಿಪ್ಟ್ ಗಳನ್ನು ಸಿದ್ಧಗೊಳಿಸುತ್ತಿದ್ದರು. ಅಲ್ಲದೆ, ವಿವಿಧ ಆನ್ ಲೈನ್ ಆ್ಯಪ್ ಬಳಸಿ ಇಂಟರ್‌ನೆಟ್ ಮೂಲಕ ಕರೆಗಳನ್ನು ಮಾಡಿ ಅಮೆರಿಕಾ ಹಾಗೂ ಕೆನಡಾ ಪ್ರಜೆಗಳಿಗೆ ಬೆದರಿಸಿ ಹಣ ವಸೂಲಿ ಮಾಡಿದ್ದಾರೆ ಎಂದು ಆಯುಕ್ತರು ವಿವರಿಸಿದ್ದಾರೆ.

ಇದೀಗ ದಾಳಿ ವೇಳೆ ತಪ್ಪಿಸಿಕೊಂಡಿರುವ ಮಾಸ್ಟರ್ ಮೈಂಡ್‌ಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com