
ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದ ಜನರಿಗೆ ಪಟಾಕಿ ಹಂಚಲು ಪಟಾಕಿ ದಾಸ್ತಾನು ಮಾಡಿದ್ದ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಕಚೇರಿಗೆ ಬೀಗ ಜಡಿದರು. ಘಟನೆ ವೇಳೆ ಪೊಲೀಸರು ಹಾಗೂ ಮುನಿರತ್ನ ನಡುವೆ ಮಾತಿನ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಕೆಲ ಕಾಲ ಹೈಡ್ರಾಮವೇ ನಡೆಯಿತು.
ಲಕ್ಷ್ಮೀದೇವಿ ನಗರ ವಾರ್ಡ್‌ನ ಶಾಸಕರ ಕಚೇರಿಯಲ್ಲಿ ಪಟಾಕಿ ದಾಸ್ತಾನು ಇರುವ ವಿಚಾರ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದರು.
ಕಚೇರಿ ಲಾಕ್ ಆಗಿದ್ದರಿಂದ, ಪೊಲೀಸರು ಬಾಗಿಲು ತೆರೆಯಲು ಶಾಸಕರನ್ನು ಕರೆದರು. ಈ ವೇಳೆ ಶಾಸಕ ಮುನಿರತ್ನ, ಅವರ ಬೆಂಬಲಿಗರು ಹಾಗೂ ಪೊಲೀಸರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಹಂಚಲು ಕಾನೂನಿನಲ್ಲಿ ಅವಕಾಶವಿಲ್ಲ. ಲೈಸೆನ್ಸ್ ಇರಬೇಕು. ಕೆಲ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸುಖಾಸುಮ್ಮನೆ ಪಟಾಕಿ ಹಂಚಲು ಅವಕಾಶವಿಲ್ಲ ಎಂದು ಪೊಲೀಸರು ಹೇಳಿದರು.
ಬಳಿಕ ಮುನಿರತ್ನ ಅವರ ಭಾರೀ ವಿರೋಧದ ನಡುವೆಯೂ ಬೀಗ ಒಡೆದು, ಒಳ ಪ್ರವೇಶಿಸಿದ ಪೊಲೀಸರು, ಪರಿಶೀಲನೆ ನಡೆಸಿ ಪಟಾಕಿ ದಾಸ್ತಾನ ಇದ್ದ ಕಚೇರಿಗೆ ಬೀಗ ಹಾಕಿದರು.
ಪಟಾಕಿಗಳನ್ನು ಅಧಿಕೃತ ಅಂಗಡಿಗಳಿಂದ ಖರೀದಿಸಲಾಗಿದೆ. ಅದಕ್ಕೆ ಬಿಲ್‌ಗಳಿವೆ. ಪಟಾಕಿಗಳನ್ನು ಕಾನೂನುಬದ್ಧವಾಗಿ ಖರೀದಿಸಿದ್ದರೂ ಸಹ, ಸಾರ್ವಜನಿಕ ಸ್ಥಳಗಳಲ್ಲಿ ವಿತರಿಸಲು ಸಾಧ್ಯವಿಲ್ಲ ಎಂದು ಪೊಲೀಸರು ಅನುಮತಿ ನಿರಾಕರಿಸಿದ್ದಾರೆಂದು ಮುನಿರತ್ನ ಅವರು ಹೇಳಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರ ಕ್ರೌರ್ಯವಲ್ಲದೆ ಬೇರೇನೂ ಅಲ್ಲ. ಪ್ರತಿ ವರ್ಷ ಪಟಾಕಿಗಳನ್ನು ವಿತರಿಸಲಾಗುತ್ತಿದೆ. ಇತರ ಸ್ಥಳಗಳಲ್ಲಿಯೂ ಪಟಾಕಿಗಳನ್ನು ವಿತರಿಸಲಾಗುತ್ತದೆ. ಈ ನಿಯಮ ನನಗೆ ಮಾತ್ರ ಏಕೆ? ಪ್ರತಿ ವರ್ಷ ಹಬ್ಬಗಳ ಸಮಯದಲ್ಲಿ ನೋಟ್‌ಬುಕ್‌ಗಳು ಮತ್ತು ಕಿಟ್‌ಗಳನ್ನು ವಿತರಿಸಲಾಗುತ್ತದೆ. ಹಬ್ಬದ ವೇಳೆ ಖರೀದಿಸಿ ಆಚರಿಸಲು ಶಕ್ತರಲ್ಲದವರಿಗೆ ಪಟಾಕಿಗಳನ್ನು ವಿತರಿಸಲಾಗುತ್ತದೆ.
ನಾನು ಪಟಾಕಿ ವಿತರಿಸುವುದನ್ನು ತಡೆಯಲು ಸುಮಾರು 100 ಪೊಲೀಸರು ಬಂದಿದ್ದಾರೆ. ಯಾರಾದರೂ ಇದನ್ನು ಪ್ರಶ್ನಿಸಿದರೆ, ಅವರ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುತ್ತಾರೆ. ಒಕ್ಕಲಿಗ ಸಮುದಾಯದ 43 ಮಂದಿ ವಿರುದ್ಧ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಪಟಾಕಿ ತೆಗೆದುಕೊಳ್ಳಲು ಬಂದಿದ್ದ ಕೆಲವು ಮಹಿಳೆಯರು ಮಾತನಾಡಿ, ಹಬ್ಬ ಆಚರಿಸಲು ಶಾಸಕರು ಸಹಾಯ ಮಾಡುತ್ತಿದ್ದಾರೆ. ಕೋವಿಡ್ ಸಮಯದಲ್ಲಿಯೂ ಸಹ, ನಮಗೆ ಸಹಾಯ ಮಾಡಿದ್ದರು ಎಂದು ಹೇಳಿದ್ದಾರೆ.
ಇದೇ ವೇಳೆ ಪಟಾಕಿ ಸಿಡಿಸಿ ದೀಪಾವಳಿ ಆಚರಿಸಲು ಅವಕಾಶ ನೀಡದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement