'ಅಕ್ಟೋಬರ್ 30 ರಂದು ದಕ್ಷಿಣ ಭಾರತದ ನಗರಾಭಿವೃದ್ಧಿ ಸಚಿವರುಗಳ ಸಭೆ; ಮನೋಹರ ಲಾಲ್ ಖಟ್ಟರ್ ಮುಂದೆ ಬೆಂಗಳೂರು ಅಭಿವೃದ್ಧಿ ಕುರಿತ ಬೇಡಿಕೆ ಮಂಡನೆ'

ಕೇಂದ್ರದ ನಗರಾಭಿವೃದ್ಧಿ ಸಚಿವರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ನಾವು ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡುತ್ತೇವೆ. ಈಗಾಗಲೇ ಹಲವು ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಕೇಳಿದ್ದೇವೆ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಇದೇ 30ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ನಗರಾಭಿವೃದ್ಧಿ ಜವಾಬ್ದಾರಿ ಹೊಂದಿರುವ ಸಚಿವರುಗಳ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಇಂಧನ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್ ಅವರು ಒಪ್ಪಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಅನುದಾನಕ್ಕೆ ಒತ್ತಡ ಹಾಕುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿ ಕೇಳುತ್ತೇವೆ. ಕೇಂದ್ರದ ನಗರಾಭಿವೃದ್ಧಿ ಸಚಿವರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ನಾವು ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡುತ್ತೇವೆ. ಈಗಾಗಲೇ ಹಲವು ಬಾರಿ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಅನುದಾನ ಕೇಳಿದ್ದೇವೆ” ಎಂದು ತಿಳಿಸಿದರು.

ಬೆಂಗಳೂರು ಹೊರವಲಯದಲ್ಲಿ ಮುಂದೆ ಜಿಬಿಎ ವ್ಯಾಪ್ತಿಗೆ ಸೇರಬಹುದಾದ ಸ್ಥಳೀಯ ಸಂಸ್ಥೆಗಳ ಗಡಿಪ್ರದೇಶಗಳ ಭೇಟಿ ಬಗ್ಗೆ ಮಾಹಿತಿ ನೀಡಿದ ಶಿವಕುಮಾರ್ ಅವರು, “ಮುಂದೆ ಜಿಬಿಎ ವ್ಯಾಪ್ತಿಗೆ ಸೇರಲು ಅರ್ಹತೆ ಇರುವ ಜಿಬಿಎ ಗಡಿಭಾಗದ, ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರದೇಶಗಳನ್ನು ವೀಕ್ಷಣೆ ಮಾಡಿದ್ದೇನೆ. ಕೆಲವು ನಗರ ಸಭೆಗಳು, ಪಟ್ಟಣ ಪಂಚಾಯಿತಿಗಳು ಸೇರಿದಂತೆ ಅನೇಕ ಸ್ಥಳೀಯ ಸಂಸ್ಥೆಗಳ ಗಡಿಪ್ರದೇಶಗಳು ನನ್ನ ಇಲಾಖೆ ವ್ಯಾಪ್ತಿಗೆ ಸೇರಿದ್ದು, ಶುಕ್ರವಾರ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆದಿದ್ದೇನೆ.

ಈ ಪ್ರದೇಶದ ಕೆಲವು ಭಾಗಗಳನ್ನು ಮುಂದಿನ ದಿನಗಳಲ್ಲಿ ಜಿಬಿಎ ಅಡಿಯಲ್ಲಿ ಬರುವ ಬೆಂಗಳೂರು ಪಾಲಿಕೆಗಳ ವ್ಯಾಪ್ತಿಗೆ ಸೇರಿಸುವ ಸಂದರ್ಭವಿದೆ. ಬಿ.ಎಸ್. ಪಾಟೀಲ್ ಅವರ ಸಮಿತಿ ಮೂಲಕ ಜಿಬಿಎ ವ್ಯಾಪ್ತಿಗೆ ಸೇರಿಸಬಹುದಾದ ಪ್ರದೇಶಗಳ ಬಗ್ಗೆ ವರದಿ ತಯಾರಾಗುತ್ತಿದೆ. ಈ ವಿಚಾರವಾಗಿ ಶಾಸಕರು, ಸಂಸದರು, ಸಾರ್ವಜನಿಕರು ಸಂಘ ಸಂಸ್ಥೆಗಳ ಜೊತೆ ಚರ್ಚಿಸಲು ಸೂಚಿಸಿದ್ದೇವೆ” ಎಂದರು.

DK Shivakumar
ಕಿರಣ್ ಮಜುಂದಾರ್ ಶಾ ಕುರಿತು ಟೀಕೆ: DCM ಡಿ.ಕೆ ಶಿವಕುಮಾರ್ ವಿರುದ್ಧ ಉದ್ಯಮಿ ಹರ್ಷ್‌ ಗೋಯೆಂಕಾ ಕಿಡಿ

“ಈ ವಾರಾಂತ್ಯದಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಮೂಲಕ ಸಾರ್ವಜನಿಕರನ್ನು ಭೇಟಿ ಮಾಡಲಾಗುವುದು. ಅದಾದ ಬಳಿಕ ಐಟಿ-ಬಿಟಿ ಸಂಸ್ಥೆಗಳೊಂದಿಗೆ ಸಭೆ ನಡೆಸುತ್ತೇವೆ. ಅದರಲ್ಲೂ ಮಹದೇವಪುರ ಹಾಗೂ ಕೆ.ಆರ್ ಪುರಂ ವ್ಯಾಪ್ತಿಯಲ್ಲಿ ಸಭೆ ನಡೆಸಲಾಗುವುದು” ಎಂದು ತಿಳಿಸಿದರು.

ಈಗಿರುವ ಬೆಂಗಳೂರು ಪಾಲಿಕೆಗಳ ವ್ಯಾಪ್ತಿಯಿಂದಾಚೆಗೆ ಸುಮಾರು 25 ಲಕ್ಷ ಜನಸಂಖ್ಯೆ ಇದೆ. ಇವರನ್ನು ಮುಂದೆ ಪಾಲಿಕೆ ವ್ಯಾಪ್ತಿಗೆ ಸೇರಿಸಿಕೊಳ್ಳಬೇಕಾಗುತ್ತದೆ. ಬೆಂಗಳೂರನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕಿದೆ. ಹೀಗಾಗಿ ಈ ಪ್ರದೇಶಗಳ ಅಭಿವೃದ್ಧಿ ಮಾಡಬೇಕಾಗಿದೆ. ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಏರ್ ಪೋರ್ಟ್ ರಸ್ತೆ, ಯಲಹಂಕದ ಕೆಲವು ಪ್ರದೇಶ ಇನ್ನು ಪಂಚಾಯ್ತಿಯಾಗಿಯೇ ಉಳಿದುಕೊಂಡಿವೆ.

ಎಲ್ಲೆಲ್ಲಿ ನಗರೀಕರಣ ಹೆಚ್ಚಾಗಿದೆ, ಆ ಪ್ರದೇಶಗಳಲ್ಲಿ ಅಚ್ಚುಕಟ್ಟಾಗಿ ಯೋಜನೆ ರೂಪಿಸಬೇಕಿದೆ. ಕೆಲವು ಪ್ರದೇಶಗಳಲ್ಲಿ ಕಸ ಎತ್ತುತ್ತಾರೆ, ಮತ್ತೆ ಕೆಲವು ಪ್ರದೇಶಗಳಲ್ಲಿ ಕಸ ಎತ್ತದೇ ಅವು ಪಂಚಾಯ್ತಿ ವ್ಯಾಪ್ತಿ ಎಂದು ಕಾರಣ ಹೇಳುತ್ತಾರೆ. ಹೀಗಾಗಿ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿ ಪಡಿಸಬೇಕಾಗಿದೆ. ನಾನು ನಕ್ಷೆಯಲ್ಲಿ ಆ ಪ್ರದೇಶಗಳನ್ನು ನೋಡುವುದಕ್ಕಿಂತ ಅಲ್ಲಿಗೆ ಹೋಗಿ ಕಣ್ಣಾರೆ ನೋಡಬೇಕು ಎಂದು ಈ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ” ಎಂದರು.

ರಸ್ತೆಗುಂಡಿ ಮುಚ್ಚುವ ಗಡುವು ಸಮೀಪಿಸುತ್ತಿದೆ ಎಂದು ಕೇಳಿದಾಗ, “ಅಧಿಕಾರಿಗಳು ರಸ್ತೆಗುಂಡಿ ಮುಚ್ಚುತ್ತಿದ್ದಾರೆ. ಅವರಿಗೆ ಜವಾಬ್ದಾರಿ ವಹಿಸಿದ್ದೇವೆ. ಕೆಲವು ಪ್ರದೇಶಗಳಲ್ಲಿ ರಸ್ತೆ ಗುಂಡಿ ಮುಚ್ಚುವ ಬದಲು ಒಂದು ಪದರ ರಸ್ತೆಯನ್ನೇ ಹಾಕುತ್ತಿದ್ದೇವೆ. ಈ ಕಾಮಗಾರಿಗಳು ನಿರಂತರವಾಗಿ ಮುಂದುವರಿಯುತ್ತವೆ. ಪ್ರಮುಖ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲಾಗುತ್ತಿದೆ. ಈಗ ಮಳೆ ಕೂಡ ಆಗಮಿಸುತ್ತಿದೆ. ಮಳೆ ನಿಲ್ಲಲಿ ಎಂದು ನಾವು ಕಾಯುತ್ತಿದ್ದೇವೆ. ಮಳೆ ನಿಂತ ಬಳಿಕ ನಾವು ಮತ್ತೆ ಈ ಕಾಮಗಾರಿ ಮುಂದುವರಿಸುತ್ತೇವೆ” ಎಂದು ತಿಳಿಸಿದರು.

DK Shivakumar
ಟ್ವೀಟ್ ವಾರ್ ನಂತರ ಸಿಎಂ-ಡಿಸಿಎಂ ಭೇಟಿ ಮಾಡಿದ ಕಿರಣ್ ಮಜುಂದಾರ್ ಶಾ; ರಸ್ತೆಗುಂಡಿ ಸಮಸ್ಯೆ ಪ್ರಸ್ತಾಪ

ಯತಿಂದ್ರ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ

ಯತೀಂದ್ರ ಅವರ ಹೇಳಿಕೆ ಹಾಗೂ ಬೇರೆ ಶಾಸಕರ ವಿರುದ್ಧ ಕೈಗೊಳ್ಳುವ ಶಿಸ್ತು ಕ್ರಮ ಅವರ ವಿರುದ್ಧ ಯಾಕೆ ತೆಗೆದುಕೊಳ್ಳುತ್ತಿಲ್ಲ ಎಂದು ಕೇಳಿದಾಗ, “ಈ ಸಂದರ್ಭದಲ್ಲಿ ನಾನು ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಸೂಕ್ತ ಸಮಯದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 6 ಸಾವಿರ ಮತಗಳನ್ನು ತಿರುಚಲಾಗಿತ್ತು ಎಂದು ಎಸ್ಐಟಿ ದೃಢಪಡಿಸಿರುವ ಬಗ್ಗೆ ಕೇಳಿದಾಗ, “ಇದರಲ್ಲಿ ಯಾವುದೇ ಅನುಮಾನವಿಲ್ಲ. ದೂರವಾಣಿ ಸಂಖ್ಯೆಗಳ ಮೂಲಕ ಈ ಕೆಲಸ ಮಾಡಿದ್ದಾರೆ. ಈ ಬಗ್ಗೆ ಆ ಸಮಯದಲ್ಲೇ ಅಧಿಕಾರಿಗಳು ದೂರು ನೀಡಿದ್ದರು. ಈ ಪ್ರಕರಣದಲ್ಲಿ ಕಾನೂನು ತನ್ನ ಕ್ರಮ ಕೈಗೊಳ್ಳಲಿದೆ” ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com