

ಬೆಂಗಳೂರು: ನೈತಿಕ ಸ್ಥೈರ್ಯ ಹೆಚ್ಚಿಸುವ ಸಲುವಾಗಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ಕೆಳ ಹಂತದ ಸಿಬ್ಬಂದಿಗಳು ಹಾಗೂ ಅವರ ಕುಟುಂಬಗಳೊಂದಿಗೆ ದೀಪಾವಳಿ ಆಚರಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮತ್ತು ಅವರ ಅಧೀನದಲ್ಲಿರುವ ಅಧಿಕಾರಿಗಳು ಮಂಗಳವಾರ ಸಂಜೆ 60 ಪೊಲೀಸ್ ವಸತಿ ನಿಲಯಗಳಲ್ಲಿ ಸಿಬ್ಬಂದಿ ಹಾಗೂ ಅವರ ಕುಟುಂಬಗಳೊಂದಿಗೆ ದೀಪಾವಳಿಯನ್ನು ಆಚರಿಸಿದರು.
ಆಯುಕ್ತರು, ಹೆಚ್ಚುವರಿ ಆಯುಕ್ತರು ಮತ್ತು ಜಂಟಿ ಪೊಲೀಸ್ ಆಯುಕ್ತರು ಮತ್ತು ನ್ಯಾಯವ್ಯಾಪ್ತಿಯ ಪೊಲೀಸ್ ಉಪ ಆಯುಕ್ತರು (ಡಿಸಿಪಿಗಳು) ಪೊಲೀಸ್ ವಸತಿ ನಿಲಯಗಳಿಗೆ ಭೇಟಿ ನೀಡಿ ಎಲ್ಲಾ ಕುಟುಂಬಗಳಿಗೆ ಸಿಹಿ ಹಾಗೂ ಹಸಿರು ಪಟಾಕಿಗಳನ್ನು ವಿತರಿಸಿದರು.
ಬಳಿಕ ಅಧಿಕಾರಿಗಳು ಸಿಬ್ಬಂದಿಗಳ ಮಕ್ಕಳೊಂದಿಗೆ ಸಂವಹನ ನಡೆಸಿದರು. ಈ ವೇಳೆ ಪರಿಸರ ಸ್ನೇಹಿ ಆಚರಣೆಗಳನ್ನು ಉತ್ತೇಜಿಸಿದರು ಮತ್ತು ಪೊಲೀಸ್ ಇಲಾಖೆಗೆ ನೀಡಿದ ಬೆಂಬಲಕ್ಕಾಗಿ ಕುಟುಂಬಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಪೊಲೀಸ್ ಸಿಬ್ಬಂದಿ ಯಾವಾಗಲೂ ಕರ್ತವ್ಯದಲ್ಲಿರುತ್ತಾರೆ, ಅವರಿಗೆ ನಿಗದಿತ ಸಮಯವಿಲ್ಲ. ಅವರಿಗೆ ತಮ್ಮ ಮಕ್ಕಳು ಮತ್ತು ಕುಟುಂಬಗಳೊಂದಿಗೆ ಹಬ್ಬ ಆಚರಿಸಲು ಸಮಯ ಸಿಗುವುದಿಲ್ಲವಾದ್ದರಿಂದ ಈ ರೀತಿಯ ಚಿಂತನೆ ನಡೆಸಲಾಯಿತು ಎಂದು ಸೀಮಂತ್ ಕುಮಾರ್ ಅವರು ಹೇಳಿದ್ದಾರೆ.
ಈ ರೀತಿ ಈ ಮೊದಲು ಯಾರೂ ಮಾಡಿರಲಿಲ್ಲ. ನಾನು ನನ್ನ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದೆ. ಇದನ್ನು ಔಪಚಾರಿಕ ಕಾರ್ಯಕ್ರಮವನ್ನಾಗಿ ಮಾಡಲು ಬಯಸದೆ, ಸಾಧ್ಯವಾದಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ನಗರದಾದ್ಯಂತ 60 ಪೊಲೀಸ್ ವಸತಿ ನಿಲಯಗಳಿದ್ದು, ಕೆಲವು 300 ಫ್ಲಾಟ್‌ಗಳನ್ನು ಹೊಂದಿವೆ. ನಾವು ತಂಡಗಳನ್ನು ರಚಿಸಿ, ಅಧೀನ ಅಧಿಕಾರಿಗಳನ್ನು ಹೊಂದಿರುವ ಪ್ರತಿಯೊಬ್ಬ ಅಧಿಕಾರಿಗೆ ಸಿಹಿತಿಂಡಿಗಳು ಮತ್ತು ಪಟಾಕಿಗಳನ್ನು ನೀಡಿ, ಭೇಟಿ ನೀಡುವಂತೆ ಸೂಚಿಸಲಾಯಿತು ಎಂದು ತಿಳಿಸಿದ್ದಾರೆ.
ನಮ್ಮ ಭೇಟಿಯನ್ನು ಮಕ್ಕಳು ನಿರೀಕ್ಷಿಸಿರಲಿಲ್ಲ. ನಮ್ಮ ಭೇಟಿಯಿಂದ ಅವರು ಬಹಳ ಸಂತೋಷಪಟ್ಟಲು. ಇದು ಸಿಬ್ಬಂದಿಗಳ ಮನೋಸ್ಥೈರ್ಯ ಹೆಚ್ಚಿಸಿದೆ. ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು ಎಂದು ಡಿಸಿಪಿ (ಉತ್ತರ) ಬಾಬಾಸಾಬ್ ನೇಮಗೌಡ ಅವರು ಹೇಳಿದ್ದಾರೆ.
ಪೊಲೀಸ್ ಆಯುಕ್ತರೊಂದಿಗೆ ದೀಪಾವಳಿ ಆಚರಿಸಿದ್ದು ಇದೇ ಮೊದಲು. ಇದು ನಿಜಕ್ಕೂ ಆಶ್ಚರ್ಯ ಹಾಗೂ ಸಂತಸವನ್ನು ತಂದಿದೆ ಎಂದು ನಂದಿನಿ ಲೇ ಔಟ್ ವಸತಿ ನಿಲಯದಲ್ಲಿರುವ ಪೊಲೀಸ್ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ವಿ.ಕೆ. ವಾಸುದೇವ್ ಅವರು ಮಾತನಾಡಿ, ಸಿಎಆರ್ (ದಕ್ಷಿಣ) ಆವರಣದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳು ಪೊಲೀಸ್ ಅಧಿಕಾರಿಗಳೊಂದಿಗೆ ದೀಪಾವಳಿ ಆಚರಿಸಿದರು. ಇಲ್ಲಿನ ಕೆಲವರು ಅನಾಥರಾಗಿದ್ದು, ಈ ರೀತಿ ಹಬ್ಬ ಆಚರಿಸುವುದು ವಿದ್ಯಾರ್ಥಿಗಳಿಗೆ ಅಪರೂಪ. ಮಕ್ಕಳಿಗೆ ಸಿಹಿ ತಿಂಡಿ ಹಾಗೂ ಹಸಿರು ಪಟಾಕಿ ವಿತರಿಸಲಾಯಿತು ಎಂದು ಹೇಳಿದ್ದಾರೆ.
ನಂದಿನಿ ಲೇಔಟ್ ಪೊಲೀಸ್ ಕ್ವಾರ್ಟರ್ಸ್ ನಿವಾಸಿ ರೇಖಾ ಅವರು ಮಾತನಾಡಿ, ಪೊಲೀಸ್ ಆಯುಕ್ತರು ನಮ್ಮೊಂದಿಗೆ ದೀಪಾವಳಿ ಆಚರಿಸುತ್ತಿರುವುದು ಸಂತೋಷ ತಂದಿದೆ. ನಗರದ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಇಂತಹ ಆಚರಣೆಗಳು ಬಹಳ ಅಪರೂಪ ಎಂದು ಹೇಳಿದ್ದಾರೆ.
Advertisement