

ಬೆಂಗಳೂರು: ತಾಯಿಯ ಚಿನ್ನದ ಸರ ಕದ್ದಿದ್ದನ್ನು ಪ್ರಶ್ನಿಸಿದ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆಯೊಂದು ಕೋಣನಕುಂಟೆ ಪ್ರದೇಶದ ಗಣಪತಿಪುರದ ಸ್ಮಶಾನ ರಸ್ತೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಜಿಡಿ ರಾಹುಲ್ (20) ಎಂದು ಗುರ್ತಿಸಲಾಗಿದೆ. ಈತ ಹುಳಿಮಾವಿನ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಐದನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದ.
ಪ್ರಕರಣ ಸಂಬಂಧ ಆರೋಪಿ ಪ್ರೀತಂ (19)ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದು, ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿ ಪ್ರೀತಂ ಹೊಸ ಬೈಕ್ ಖರೀದಿ ಮಾಡಲು ತಾಯಿಯ ಚಿನ್ನದ ಸರ ಕದ್ದಿದ್ದ. ಬಳಿಕ ಆರೋಪವನ್ನು ರಾಹುಲ್ ಮೇಲೆ ಹೊರಿಸಿದ್ದ. ಈ ನಡುವೆ ಪ್ರೀತಂ ಪರ್ಸ್ ನಲ್ಲಿ ಚಿನ್ನದ ಸರವನ್ನು ಇರುವುದನ್ನು ರಾಹುಲ್ ನೋಡಿದ್ದ. ಸ್ವಲ್ಪ ದಿನದ ನಂತರ ಸ್ನೇಹಿತರು ಪ್ರೀತಂ ಕಳ್ಳತನ ಮಾಡಿದ್ದ ವಿಚಾರವನ್ನು ರಾಹುಲ್ ಗಮನಕ್ಕೆ ತಂದಾಗ, ಸತ್ಯ ತಿಳಿದಿದೆ. ಬಳಿಕ ಪ್ರೀತಂ ಅವರ ತಾಯಿಯ ಬಳಿ ರಾಹುಲ್ ಸತ್ಯ ಹೇಳಿದ್ದಾನೆ.
ಪ್ರೀತಂ ತಾಯಿ ತನ್ನ ಮಗನನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಪ್ರೀತಂ ಕುಪಿತಗೊಂಡಿದ್ದಾರೆ. ಅಕ್ಟೋಬರ್ 29ರಂದು ರಾಹುಲ್ ತನ್ನ ಸ್ನೇಹಿತರೊಂದಿಗಿದ್ದಾಗ ಸ್ಥಳಕ್ಕೆ ಬಂದ ಪ್ರೀತಂ ರಾಹುಲ್ ಜೊತೆಗೆ ಜಗಳಕ್ಕಿಳಿದಿದ್ದಾನೆ. ಮಾತಿನ ಚಕಮಕಿ ತಾರಕ್ಕೇರಿದಾಗ ಚಾಕುವಿನಿಂದ ಸ್ನೇಹಿತನಿಗೆ ಇರಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ರಾಹುಲ್ ಸ್ನೇಹಿತರು ಕನಕಪುರ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ರಾಹುಲ್ ಸಹೋದರಿ ಅಪೂರ್ವ ಅವರಿಗೆ ಮಾಹಿತಿ ನೀಡಿದ್ದಾರೆ. ಕುಟುಂಬದವರು ಆಸ್ಪತ್ರೆಗೆ ಬರುವಷ್ಟರಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧ ಅಪೂರ್ವ ಅವರು ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
Advertisement