
ಮಂಗಳೂರು: 2012 ರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸೌಜನ್ಯ ಅವರ ಕುಟುಂಬದಿಂದ ಆರೋಪ ಎದುರಿಸುತ್ತಿರುವ ಉದಯ್ ಜೈನ್ ಬುಧವಾರ ಎಸ್ ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದರು.
ಬೆಳ್ತಂಗಡಿಯಲ್ಲಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಹಾಜರಾದ ಉದಯ್ ಜೈನ್ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಉದಯ್ ಜೈನ್ ಅವರನ್ನು ಆರೋಪಿಗಳಲ್ಲಿ ಒಬ್ಬರೆಂದು ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎಸ್‌ಐಟಿ ನೀಡಿದ ಸಮನ್ಸ್ ನಂತರ ಜೈನ್ ಹಾಜರಾಗಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
FIR ಕುರಿತು ಉದಯ್ ಜೈನ್ ಹೇಳಿದ್ದೇನು?
ಎಸ್ ಐಟಿ ವಿಚಾರಣೆಗೆ ಹಾಜರಾದ ಉದಯ್ ಜೈನ್, 'ಬುಧವಾರ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಯೊಬ್ಬರು ನಿನ್ನೆ ದೂರವಾಣಿ ಕರೆ ಮಾಡಿ ತಿಳಿಸಿದ್ದರು. ಹಾಗಾಗಿ ಇಲ್ಲಿಗೆ ಬಂದಿದ್ದೇನೆ' ಎಂದು ಸುದ್ದಿಗಾರರಿಗೆ ಹೇಳಿದರು.
'ಸೌಜನ್ಯ ಕೊಲೆ ಪ್ರಕರಣದ ಎಫ್‌ಐಆರ್ ನಲ್ಲಿ ನಮ್ಮ ಹೆಸರು ಇರಲಿಲ್ಲ. ಆದರೂ ನಮ್ಮನ್ನು ಆರೋಪಿಗಳನ್ನಾಗಿಸುವ ಷಡ್ಯಂತ್ರ ನಡೆದಿತ್ತು. ಸಿಬಿಐ ಮತ್ತು ಸಿಐಡಿ ಅಧಿಕಾರಿಗಳು ನಮ್ಮನ್ನು ವಿಚಾರಣೆಗೆ ಒಳಪಡಿಸಿದ್ದರು. ನಮ್ಮ ಮಂಪರು ಪರೀಕ್ಷೆಯನ್ನೂ ನಡೆಸಲಾಗಿತ್ತು. ಆ ಪ್ರಕರಣದಲ್ಲಿ ನಮ್ಮ ಪಾತ್ರ ಇಲ್ಲ ಎಂದು ಸಾಬೀತಾಗಿತ್ತು ಎಂದರು.
ಅಂತೆಯೇ, 'ಈಗ ಎಸ್ಐಟಿಯವರು ಯಾವ ಪ್ರಕರಣ ಸಂಬಂಧ ವಿಚಾರಣೆಗೆ ಕರೆದಿದ್ದಾರೆ ಎಂದು ಗೊತ್ತಿಲ್ಲ. ನನ್ನಂತೆಯೇ, ಇನ್ನಿಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿಯವರು ಕರೆ ಮಾಡಿದ್ದಾರೆ. ನಾನು ಧೀರಜ್ ಕೆಲ್ಲ ಅವರಿಗೆ ಕರೆ ಮಾಡಿದ್ದೆ. ಆಗ ಅವರು ಈ ವಿಚಾರ ತಿಳಿಸಿದ್ದಾರೆ. ಎಸ್ಐಟಿಯವರು ಕರೆದಿದ್ದಾರೆ ಎಂದ ಮೇಲೆ ಅವರು ಕೂಡ ಬರಲೇ ಬೇಕಾಗುತ್ತದೆ ಅಲ್ಲವೇ' ಎಂದು ಉದಯ್ ಜೈನ್ ಹೇಳಿದರು.
ಅಂದಹಾಗೆ 17 ವರ್ಷದ ವಿದ್ಯಾರ್ಥಿನಿ ಸೌಜನ್ಯ ಅವರನ್ನು 2012 ರಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸೌಜನ್ಯಾ ಕೊಲೆ ಪ್ರಕರಣದಲ್ಲಿ ಉದಯ್ ಜೈನ್ ಅಲ್ಲದೆ ಮಲ್ಲಿಕ್ ಜೈನ್ ಹಾಗೂ ಧೀರಜ್ ಕೆಲ್ಲ ಅವರ ಹೆಸರು ಕೂಡ ತಳಕು ಹಾಕಿಕೊಂಡಿತ್ತು.
Advertisement