
ಬೆಂಗಳೂರು: ಜಕ್ಕೂರು ಏರೋಡ್ರೋಂ ರನ್ ವೇ ವಿಸ್ತರಿಸಿಸಲು ಹಾಗೂ ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಏನೇನು ಮಾಡಬಹುದೆಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಮತ್ತು ಏರೋಡ್ರೋಮ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಗಳು ಬುಧವಾರ ಚರ್ಚೆ ನಡೆಸಿದರು.
ಜಕ್ಕೂರು ಎರೋಡ್ರೋಂ ರನ್ ವೇ ವಿಸ್ತರಣೆ ಮಾಡುವುದು ಹಾಗೂ ಈ ಜಾಗವನ್ನು ಸಂಪೂರ್ಣವಾಗಿ ಸಾರ್ವಜನಿಕ ಉಪಯೋಗಕ್ಕೆ ಬಳಸಿಕೊಳ್ಳಲು ಸರ್ಕಾರದಿಂದ ಏನು ಮಾಡಬಹುದು ಎನ್ನುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಸರ್ಕಾರದ ಮುಂದೆ ಎರಡು ಯೋಜನೆಗಳಿವೆ. ಇಲ್ಲಿ ಮೇಲ್ಸೇತುವೆ ಬಂದಿರುವುದರಿಂದ ಸ್ವಲ್ಪ ಅಡಚಣೆಯಾಗುತ್ತಿದೆ. ಮೇಲ್ಸೇತುವೆ ಬರುವ ಬಗ್ಗೆ ಮೊದಲೇ ತಿಳಿದಿರಲಿಲ್ಲ. ಇಲ್ಲಿ 200 ಎಕರೆಗಿಂತಲೂ ಹೆಚ್ಚಿನ ಸ್ಥಳವಿದ್ದು, ಜಕ್ಕೂರು ವೈಮಾನಿಕ ತರಬೇತಿ ಶಾಲೆ ನಡೆಯುತ್ತಿದೆ.
ರನ್ ವೇ ವಿಸ್ತರಣೆಗೆ ಪಕ್ಕದಲ್ಲಿಯೇ ಜಮೀನನ್ನು ಪಡೆಯಬೇಕು. ಇದಕ್ಕೆ ಮೂರು ಎಕರೆಗಿಂತ ಹೆಚ್ಚು ಜಮೀನಿನ ಅಗತ್ಯವಿದೆ. ಮಾಲೀಕರು ಜಮೀನನ್ನು ಕೊಡುವುದಿಲ್ಲ ಎಂದು ಹೇಳುತ್ತಿದ್ದು, ಬೆಲೆ ಕೂಡ ದುಬಾರಿ ಆಗಿದೆ. ಲಭ್ಯ ಸ್ಥಳವನ್ನು ಹೇಗೆ ಉಪಯೋಗಿಸಬೇಕು ಎಂದೂ ಚಿಂತನೆ ನಡೆಯುತ್ತಿದೆ. ವೈಮಾನಿಕ ತರಬೇತಿ ಶಾಲೆ ನಡೆಸಬೇಕೆಂದು ನ್ಯಾಯಾಲಯದ ಆದೇಶವಿದ್ದು, ನಮ್ಮ ಸರ್ಕಾರ ಇನ್ನೇನು ಮಾಡಬಹುದು ಎಂದು ಪರಿಶೀಲಿಸುತ್ತಿದೆ ಎಂದು ಹೇಳಿದರು.
Advertisement