
ಬೆಂಗಳೂರು: ಬೆಂಗಳೂರು ನಿರ್ವಹಣೆ ಮಾಡುವ ನಿಗಮವನ್ನು 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ' (ಬಿಬಿಎಂಪಿ) ಅಥವಾ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (ಜಿಬಿಎ) ಎಂದು ಬದಲಾಯಿಸಿದರೂ ನಗರದಲ್ಲಿ ಸುರಕ್ಷಿತ ಹಾಗೂ ಅಡೆತಡೆಯಿಲ್ಲದ ಉತ್ತಮ ಪಾದಚಾರಿ ಮಾರ್ಗ ಹೊಂದುವ ಕನಸು ಮಾತ್ರ ಕನಸಾಗಿಯೇ ಉಳಿಯುವ ಸಾಧ್ಯತೆಗಳಿವೆ.
ನಿರ್ವಹಣೆಗೆ ಅನುದಾನ ಬಿಡುಗಡೆಯಾದರೂ, ಅವುಗಳ ಬಳಕೆಯಾಗದಿರುವುದು ಹಾಗೂ ಸ್ಥಳೀಯ ಸಂಸ್ಥೆಗಳ ನಡುವೆ ಸಮನ್ವಯ ಕೊರತೆಗಳು ನಗರವು ಉತ್ತಮ ಪಾದಾಚಾರಿ ಮಾರ್ಗ ಹೊಂದುವ ಕನಸನ್ನು ಕನಸಾಗಿಯೇ ಉಳಿಯುವಂತೆ ಮಾಡುತ್ತಿದೆ.
ಪ್ರಾಧಿಕಾರದ ಎಂಜಿನಿಯರಿಂಗ್ ವಿಭಾಗದ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಒಟ್ಟು 3,500-ಕಿಮೀ ಪಾದಚಾರಿ ಮಾರ್ಗದ ಪೈಕಿ ಕೇವಲ ಶೇ.8 ರಷ್ಟು ಅಂದರೆ ಸುಮಾರು 280 ಕಿಮೀ ಪಾದಚಾರಿ ಮಾರ್ಗ ಮಾತ್ರ ಉತ್ತಮ ಸ್ಥಿತಿಯಲ್ಲಿದೆ ಎಂದು ತಿಳಿದುಬಂದಿದೆ.
ಈ ಸಂಖ್ಯೆ ಕಡಿಮೆಯಾಗುವುದಿಲ್ಲ ಎಂಬ ಗ್ಯಾರಂಟಿ ಕೂಡ ಇಲ್ಲ. ಈ ಉತ್ತಮ ಪಾದಚಾರಿ ಮಾರ್ಗ ಕೂಡ ಪಾಲಿಕೆಯ ನಿರಾಸಕ್ತಿ, ನಿರ್ವಹಣೆ ಕೊರತೆ ಮತ್ತು ನಾಗರಿಕರಲ್ಲಿ ಶಿಸ್ತಿನ ಕೊರತೆಯಿಂದಾಗಿ ಅವುಗಳು ಕೂಡ ಹಾಳಾಗುವ ಸಾಧ್ಯತೆಗಳಿವೆ.
ನಗರದಲ್ಲಿ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಮತ್ತು ಕಲೆಕ್ಟರ್ ಎಂಬ ಮೂರು ವಿಧದ ರಸ್ತೆಗಳಿವೆ. ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಿಗೆ ಪಾದಚಾರಿ ಮಾರ್ಗಗಳು ಕಡ್ಡಾಯವಾಗಿದೆ. ಈ ರಸ್ತೆಗಳು 1,682 ಕಿಮೀ ಉದ್ದವನ್ನು ಹೊಂದಿದ್ದು, ಶೇ. 90% ರಷ್ಟು ರಸ್ತೆಗಳು ಪಾದಚಾರಿ ಮಾರ್ಗಗಳನ್ನು ಹೊಂದಿವೆ, ಅವುಗಳಲ್ಲಿ 150 ಕಿಮೀ ಮಾತ್ರ ಉತ್ತಮ ಸ್ಥಿತಿಯಲ್ಲಿವೆ. ಟೆಂಡರ್‌ಶ್ಯೂರ್‌ನ ಭಾಗವಾಗಿರುವ ಉಳಿದ 100 ಕಿಮೀ ಮತ್ತು ಬಿಳಿ ಮೇಲ್ಭಾಗದ ರಸ್ತೆಗಳು ಉತ್ತಮ ಮಾರ್ಗಗಳನ್ನು ಹೊಂದಿವೆ. ಶೇ.25ರಷ್ಟು ಕಲೆಕ್ಟರ್ ರಸ್ತೆಗಳು ಪಾದಚಾರಿ ಮಾರ್ಗಗಳನ್ನು ಹೊಂದಿವೆ, ಆದರೆ ಅವು ಉತ್ತಮ ಸ್ಥಿತಿಯಲ್ಲಿಲ್ಲ. ಬೆಂಗಳೂರಿನಲ್ಲಿ ಒಟ್ಟಾರೆಯಾಗಿ 3,500 ಕಿಮೀ ಪಾದಚಾರಿ ಮಾರ್ಗಗಳು ಅಸ್ತಿತ್ವದಲ್ಲಿದ್ದರೂ. ಕೇವಲ ಶೇ.8-10ರಷ್ಟು ಪಾದಚಾರಿ ಮಾರ್ಗಗಳು ಮಾತ್ರ ಉತ್ತಮ ಸ್ಥಿತಿಯಲ್ಲಿವೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಎಂಜಿನಿಯರ್ ಗಳು ಮಾಹಿತಿ ನೀಡಿದ್ದಾರೆ.
ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ವಹಣೆಗೆ ಹಂಚಿಕೆಯಾದ ಹಣವನ್ನು ಬಳಸದಿರುವುದು, ಸ್ಥಳೀಯ ಸಂಸ್ಥೆಗಳ ನಡುವಿನ ಸಮನ್ವಯ ಕೊರತೆಸ ಪುನರ್ವಿಮರ್ಶೆಯಲ್ಲಿ ಆಸಕ್ತಿ ಇಲ್ಲದಿರುವುದು ಪಾದಚಾರಿ ಮಾರ್ಗಗಳ ಕಳಪೆ ಸ್ಥಿತಿಗೆ ಕಾರಣ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಹೇಳಿದ್ದಾರೆ.
ಪಾದಚಾರಿ ಮಾರ್ಗದತ್ತ ಪ್ರಾಧಿಕಾರ ಹಾಗೂ ಸರ್ಕಾರ ಗಮನ ಹರಿಸುತ್ತಿಲ್ಲ. ನಗರ ಬೆಳೆದಂತೆ ಸಂಚಾರ ಸಮಸ್ಯೆ ಹೆಚ್ಚಾಗಿದ್ದು, ಉತ್ತಮ ರಸ್ತೆಗಳತ್ತ ಗಮನ ಹರಿಸಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
ಸಂಚಾರ ತಜ್ಞ MN ಶ್ರೀಹರಿ ಅವರು ಮಾತನಾಡಿ, ಇದು ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.
ಐಆರ್'ಸಿ ಮಾನದಂಡಗಳ ಪ್ರಕಾರ, ಪ್ರತಿ ರಸ್ತೆಯು ಗಂಟೆಗೆ 1,800 ಪಾದಚಾರಿಗಳನ್ನು ಸಾಗಿಸುವ ಸಾಮರ್ಥ್ಯವಿರುವ ಕನಿಷ್ಠ 1.8 ಮೀಟರ್ ಅಗಲದ ಪಾದಚಾರಿ ಮಾರ್ಗವನ್ನು ಹೊಂದಿರಬೇಕು. ರಸ್ತೆಗಳಂತೆಯೇ, ಮುಂದಿನ 5-10 ವರ್ಷಗಳಲ್ಲಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪಾದಚಾರಿ ಮಾರ್ಗಗಳನ್ನು ಸಹ ವಿನ್ಯಾಸಗೊಳಿಸಬೇಕು ಎಂದು ಹೇಳಿದ್ದಾರೆ.
ಉತ್ತಮ ಪಾದಚಾರಿ ಮಾರ್ಗಗಳನ್ನು ಖಚಿತಪಡಿಸಿಕೊಳ್ಳಲು ನೀತಿಗಳಿವೆ. ಆದರೆ, ಅದನ್ನು ಮಾಡಲಾಗುತ್ತಿಲ್ಲ. ಎಂಜಿನಿಯರ್‌ಗಳು ಪರಿಶೀಲನೆ ನಡೆಸುವುದಿಲ್ಲ. ಕಳಪೆ ಸ್ಥಿತಿಗಳಿಗೆ ಗುತ್ತಿಗೆದಾರರು ಮತ್ತು ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ, ಇದರಿಂದಾಗಿ ಪಾದಚಾರಿ ಮಾರ್ಗಗಳು ಇನ್ನೂ ಕೆಟ್ಟ ಸ್ಥಿತಿಯಲ್ಲಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊಫೆಸರ್ ಜೆ.ಎಂ. ಚಂದ್ರ ಕಿಶನ್ ಅವರು ತಿಳಿಸಿದ್ದಾರೆ.
Advertisement