
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಂಡರ ಹುಚ್ಚಾಟ ಮುಂದುವರೆದಿದ್ದು, ಅಂತೆಯೇ ಪುಂಡರ ಹೆಡೆಮುರಿ ಕಟ್ಟುವ ಪೊಲೀಸ್ ಕಾರ್ಯಾಚರಣೆ ಕೂಡ ಮುಂದುವರೆದಿದೆ.
ಈ ಪಟ್ಟಿಗೆ ಇದೀಗ ಹೊಸ ಪ್ರಕರಣವೊಂದು ಸೇರ್ಪಡೆಯಾಗಿದ್ದು, ಬೆಂಗಳೂರಿನ ಲಿಂಗರಾಜಪುರ ಫ್ಲೈಓವರ್‌ನ (Lingarajapura Flyover) ಕೆಳಗೆ ಕಿಡಿಗೇಡಿಯೊಬ್ಬ ಕೈಯಲ್ಲಿ ಮಾರಕಾಸ್ತ್ರ ಹಿಡಿದು ದಾಂಧಲೆ ನಡೆಸಿದ್ದ. ಕ್ಷುಲ್ಲಕ ವಿಚಾರಕ್ಕೆ ಗೂಡ್ಸ್ ಆಟೋ ಚಾಲಕನ (Auto Driver) ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೆ ಯತ್ನಿಸಿದ್ದ. ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಮೂಲಗಳ ಪ್ರಕಾರ ಹಳೇ ದ್ವೇಷದಿಂದ ಪುಂಡ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ಆರೋಪಿಯ ಹುಚ್ಚಾಟವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವಂತೆ ಈ ಘಟನೆಯಲ್ಲಿ ಆರೋಪಿ ಆಟೋ ಚಾಲಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ತಡೆಯಲು ಯತ್ನಿಸಿದಾಗ ಗೂಡ್ಸ್ ಆಟೋದ ಮಿರರ್ ಗಾಜುಗಳನ್ನು ಜಖಂಗೊಳಿಸಿದ್ದಾನೆ. ನಂತರ ಆತನ ಸ್ನೇಹಿತನೊಬ್ಬ ಆತನನ್ನು ಬೈಕ್ ಹತ್ತಿಸಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಆಗಿದ್ದೇನು?
ಲಿಂಗರಾಜಪುರ ಫ್ಲೈಓವರ್‌ನ ಕೆಳಗೆ ಸಂಜೆ ಸಮಯದಲ್ಲಿ ಈ ಘಟನೆ ನಡೆದಿದೆ. ಗೂಡ್ಸ್ ಆಟೋ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಕತ್ತಿಯಂತಹ ಉದ್ದನೆಯ ಮಾರಕಾಸ್ತ್ರವನ್ನು ಹಿಡಿದು ಆತನ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ಆರೋಪಿಯು ಚಾಲಕನೊಂದಿಗೆ ಹಿಂದಿನಿಂದಲೂ ದ್ವೇಷ ಹೊಂದಿದ್ದ ಎಂದು ಹೇಳಲಾಗಿದೆ. ಕಿಡಿಗೇಡಿಯು ಆಟೋದ ಗಾಜುಗಳನ್ನು ಒಡೆದು ಹಾನಿಗೊಳಿಸಿದ್ದಾನೆ. ಈ ಘಟನೆಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ಆರೋಪಿಯ ಮಾರಕಾಸ್ತ್ರವನ್ನು ಕಂಡು ಆತಂಕಗೊಂಡಿದ್ದರು.
ಪೊಲೀಸರ ಕ್ರಮ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋ ವೈರಲ್ ಆಗುತ್ತಲೇ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಗುರುತಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಲಿಂಗರಾಜಪುರ ಪೊಲೀಸರು ಯಶಸ್ವಿಯಾಗಿದ್ದು, ಆತನಿಗೆ ಪೊಲೀಸ್ ಟ್ರೀಟ್ ಮೆಂಟ್ ನೀಡಿದ್ದಾರೆ ಎನ್ನಲಾಗಿದೆ. ಸಿಸಿಟಿವಿ ಫುಟೇಜ್‌ಗಳು ಮತ್ತು ಸ್ಥಳೀಯರಿಂದ ಸಿಕ್ಕ ಮಾಹಿತಿಯ ಆಧಾರದ ಮೇಲೆ ತನಿಖೆಯನ್ನು ಮುಂದುವರೆಸಲಾಗಿದೆ.
Advertisement