ವಿಧಾನಸಭೆ-ಸಂಸತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಗಳಾಗಿ ಬದಲಾಗುತ್ತಿವೆ: ಸ್ಪೀಕರ್ ಓಂ ಬಿರ್ಲಾ ಕಳವಳ

ದಿನದಿಂದ ದಿನಕ್ಕೆ ಶಾಸನಸಭೆಗಳಲ್ಲಿ ಗಾಂಭೀರ್ಯತೆ ಇಲ್ಲದೆ, ಚರ್ಚೆಗಳ ಗುಣಮಟ್ಟ ತಳಮಟ್ಟಕ್ಕೆ ತಲುಪುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳೇ ಪ್ರಾಮುಖ್ಯತೆ ಪಡೆದು ಜನರ ಅಭಿವೃದ್ಧಿ ಸಂಬಂಧಿಸಿದ ವಿಷಯಗಳ ಗೌಣ ವಾಗುತ್ತಿವೆ.
CM Siddaramaiah and Assembly Speaker UT Khader greet Lok Sabha Speaker Om Birla at the 11th CPA India Region Conference in Bengaluru
ಬೆಂಗಳೂರಿನಲ್ಲಿ ನಡೆದ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತ ವಲಯದ 11ನೇ ಸಮ್ಮೇಳನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ಸ್ವಾಗತಿಸಿದರು.
Updated on

ಬೆಂಗಳೂರು: ವಿಧಾನಸಭೆ-ಸಂಸತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಗಳಾಗಿ ಬದಲಾಗುತ್ತಿವೆ ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಗುರುವಾರ ಕಳವಳ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಗುರುವಾರ ಕಾಮನ್‌ವೆಲ್ತ್ ಸಂಸದೀಯ ಸಂಘದ ಭಾರತ ವಲಯದ 11ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನಸಭೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಗಳಾಗಿ ಬದಲಾಗುತ್ತಿವೆ ಕಳವಳ ವ್ಯಕ್ತಪಡಿಸಿದ್ದು, ಪ್ರಜೆಗಳ ಆಕಾಂಕ್ಷೆಗಳನ್ನು ಈಡೇರಿಸಲು ಸಂಸತ್ತು, ವಿಧಾನಸಭೆಗಳಲ್ಲಿ ಜನಕಲ್ಯಾಣದ ಆರೋಗ್ಯಕರ ಚರ್ಚೆಗಳಾಗಬೇಕು ಎಂದು ಕರೆ ನೀಡಿದರು.

ದಿನದಿಂದ ದಿನಕ್ಕೆ ಶಾಸನಸಭೆಗಳಲ್ಲಿ ಗಾಂಭೀರ್ಯತೆ ಇಲ್ಲದೆ, ಚರ್ಚೆಗಳ ಗುಣಮಟ್ಟ ತಳಮಟ್ಟಕ್ಕೆ ತಲುಪುತ್ತಿದೆ. ರಾಜಕೀಯ ಆರೋಪ-ಪ್ರತ್ಯಾರೋಪಗಳೇ ಪ್ರಾಮುಖ್ಯತೆ ಪಡೆದು ಜನರ ಅಭಿವೃದ್ಧಿ ಸಂಬಂಧಿಸಿದ ವಿಷಯಗಳ ಗೌಣ ವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಜನರು ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಾರೆ, ಕೊನೆಯ ವ್ಯಕ್ತಿಯ ಧ್ವನಿಯನ್ನು ಕೇಳುತ್ತಾರೆಂಬ ಆಶಯದೊಂದಿಗೆ ನಮ್ಮನ್ನು ಶಾಸಕಾಂಗಕ್ಕೆ ಕಳುಹಿಸುತ್ತಾರೆ. ಲೋಕಸಭೆ, ರಾಜ್ಯಸಭೆ ಮತ್ತು ವಿಧಾನಸಭೆಗಳು ಭವಿಷ್ಯದ ಸಮಸ್ಯೆಗಳು ಮತ್ತು ಸವಾಲುಗಳ ಚರ್ಚೆಗೆ ಉದ್ದೇಶಿಸಲಾಗಿದೆ. ಆದರೆ, ಶಾಸಕಾಂಗಗಳು ಆರೋಪ ಪ್ರತ್ಯಾರೋಪಗಳಿಗೆ ವೇದಿಕೆಯಾಗಿ ಬದಲಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. ರಾಜಕೀಯ ಸೇಡನ್ನು ಬದಿಗಿಟ್ಟು ಪಕ್ಷಗಳು ಸದನಕ್ಕೆ ಬರಬೇಕು ಎಂದು ಹೇಳಿದರು.

CM Siddaramaiah and Assembly Speaker UT Khader greet Lok Sabha Speaker Om Birla at the 11th CPA India Region Conference in Bengaluru
ಅಶಿಸ್ತು ಪ್ರದರ್ಶಿಸಬೇಡಿ, ಗೌರವಯುತವಾಗಿ ನಡೆದುಕೊಳ್ಳಿ: ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡ ಸ್ಪೀಕರ್ ಓಂ ಬಿರ್ಲಾ; Video ನೋಡಿ

ಕೇಂದ್ರ ಮತ್ತು ರಾಜ್ಯ ಶಾಸಕಾಂಗಗಳು ಜನರನ್ನು ತಲುಪಲು ಒಂದೇ ವೇದಿಕೆಯನ್ನು ಹೊಂದಲು ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಬಳಸಬೇಕು, ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ಇದೇ ಸೂಚನೆಯನ್ನೇ ನೀಡಿದ್ದಾರೆ. ಶಾಸಕಾಂಗ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸಲು ಸಂಸದೀಯ ವ್ಯವಹಾರಗಳ ಸಚಿವಾಲಯವು ಅಭಿವೃದ್ಧಿಪಡಿಸಿದ NeVA (ರಾಷ್ಟ್ರೀಯ ಇ-ವಿಧಾನ ಅಪ್ಲಿಕೇಶನ್) ಅನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕಾಂಗ ಸಭೆಗಳ ಸಂಖ್ಯೆ ಕಡಿಮೆಯಾಗುವುದು, ಚರ್ಚೆಗೆ ಸೀಮಿತ ಸಮಯ, ಆಗಾಗ್ಗೆ ಗದ್ದಲ ಎದುರಾಗುವುದು ಸರಿಯಲ್ಲ. ನಾವು ನಮ್ಮ ಸಂಸ್ಕೃತಿಯನ್ನು ಬಲಪಡಿಸಬೇಕು ಎಂದು ಒತ್ತಿ ಹೇಳಿದರು.

ಭಾರದ ಜನರು ಗದ್ದಲವನ್ನು ನಿರೀಕ್ಷಿಸುವುದಿಲ್ಲ. ಪರಿಹಾರವನ್ನು ಎದುರು ನೋಡುತ್ತಿದ್ದಾರೆ. ರಚನಾತ್ಮಕ ಚರ್ಚೆಯು ಉತ್ತಮ ಕಾನೂನುಗಳಿಗೆ ಕಾರಣವಾಗುತ್ತದೆ, ಉತ್ತಮ ಕಾನೂನುಗಳು ಪರಿಣಾಮಕಾರಿ ಆಡಳಿತವನ್ನು ಖಚಿತಪಡಿಸುತ್ತವೆ. ಪರಿಣಾಮಕಾರಿ ಆಡಳಿತವು ಜನರ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.

ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ಮಾತನಾಡಿ, ಶಾಸನಸಭೆಯ ಅಧ್ಯಕ್ಷತೆ ವಹಿಸುವವರು ಕಲಾಪವನ್ನು ನಡೆಸುವುದಕ್ಕಿಂತ ಸದನವನ್ನು ಕ್ರಮಬದ್ಧವಾಗಿಡಲು ಹೆಚ್ಚಿನ ಸಮಯವನ್ನು ಕಳೆಯಬೇಕಾಗಿದೆ ಎಂದು ಹೇಳಿದರು.

CM Siddaramaiah and Assembly Speaker UT Khader greet Lok Sabha Speaker Om Birla at the 11th CPA India Region Conference in Bengaluru
Watch | ಭಾರತದ ಸಂವಿಧಾನ ಶ್ರೇಷ್ಠ, ಸುಂದರ- ರಿಜಿಜು; ನಿಮ್ಮ ಬಟ್ಟೆಯೂ ಸುಂದರವಾಗಿದೆ- ಓಂ ಬಿರ್ಲಾ

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸದನಗಳು ಕೇವಲ ಔಪಚಾರಿಕತೆ ಸೀಮಿತವಾಗದೆ ನೈಜ ವಿಚಾರಗಳ ಕುರಿತು ವಿಶ್ವಾಸ ಮೂಡಿಸುವ ಗಹನವಾದ ಚರ್ಚೆಗಳ ವೇದಿಕೆಯಾಗಬೇಕು. ಜನಪ್ರತಿನಿಧಿಗಳು ಕೇವಲ ಚುನಾವಣೆ ವೇಳೆ ಮಾತ್ರ ಉತ್ತರ ದಾಯಿಗಳಾಗದೆ ಪ್ರತಿನಿತ್ಯವೂ ಜನರ ವಿಚಾರಗಳಿಗೆ ವಿಧಾನಸಭೆಯಲ್ಲಿ ಸ್ಪಂದಿಸುವ ಉತ್ತರದಾಯಿಗಳಾಗಬೇಕು ಎಂದರು.

ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ಧ್ವನಿಯಾಗಿ ಚರ್ಚೆಗಳನ್ನು ನಡೆಸುವ ಬಹುತ್ವದ ವೇದಿಕೆಯಾಗಬೇಕು. ಸಂಸತ್ತಿನಲ್ಲಿ ಜನಗಳ ಧ್ವನಿ ಪ್ರತಿಧ್ವನಿಸಬೇಕು. ಜಗತ್ತಿನ ಅತ್ಯುತ್ತಮ ಸಂಸದೀಯ ವ್ಯವಹಾರಗಳ ಮಾದರಿಗಳನ್ನು ನೋಡಿ ಅನುಸರಿಸಬೇಕು. ಐರ್ಲ್ಯಾಂಡಿನ ಶಾಸನಸಭೆ, ಬ್ರೆಜಿಲ್‌ನ ಬಜೆಟ್ ರಚನೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಹಾಗೂ ನಮ್ಮ ದೇಶದ ಗ್ರಾಮ ಸಭೆಗಳು ಮಾದರಿಯಾಗಬೇಕು. ಪ್ರಜಾಪ್ರಭುತ್ವದಲ್ಲಿ ನಾವಿನ್ಯತೆ ಅಳವಡಿಸಿ ಕೊಳ್ಳುವ ಮೂಲಕ ಜನರ ನಂಬಿಕೆಗಳನ್ನು ಗಟ್ಟಿಗೊಳಿಸಬೇಕು ಎಂದರು.

ಸತ್ಯಕ್ಕಿಂತ ಸುಳ್ಳು ವೇಗವಾಗಿ ಹಬ್ಬಿ, ಭಾವನೆ ಗಳು ಮೇಲುಗೈ ಸಾಧಿಸುವ ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ ಕಾಡುತ್ತಿದೆ. ಹೀಗಾಗಿ ಪ್ರಜಾಪ್ರಭುತ್ವದ ಮೂಲ ಆಶಯ ವಾಗಿರುವ ನ್ಯಾಯ, ಸಮಾನತೆ, ಭಾತೃತ್ವ, ಮೌಲ್ಯಗಳನ್ನು ಶಾಸನಸಭೆಗಳು ಎತ್ತಿ ಹಿಡಿಯ ಬೇಕು. ಸಿನಿಕತೆ, ವ್ಯವಹಾರಿಕ ರಾಜಕೀಯಕ್ಕೆ ಸಂಸತ್ತು ವೇದಿಕೆಯಾಗದೆ ಮೌಲ್ಯಗಳ ರಕ್ಷಕನಾಗಬೇಕು ಎಂದು ಸಿಎಂ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಉಪ ಸ್ಪೀಕರ್ ರುದ್ರಪ್ಪ ಲಮಾಣಿ, ಪರಿಷತ್ತಿನ ಅಧ್ಯಕ್ಷ ಬಸವರಾಜ ಹೊರಟ್ಟಿ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಸೇರಿ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com